"ಪ್ಲಾನ್ ಎ" ಫಲಿಸದಿದ್ದರೆ, "ಪ್ಲಾನ್ ಬಿ" ಕೂಡ ಸಿದ್ಧ, ಹಠ ಬಿಟ್ಟರೆ ಮಾತ್ರ ಸಮಸ್ಯೆ ಇತ್ಯರ್ಥ: ರಾಮಲಿಂಗಾ ರೆಡ್ಡಿ

ಸಾರಿಗೆ ನೌಕರರ ತಮ್ಮ ಹಠ ಬಿಟ್ಟು ಬಂದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಸಾರಿಗೆ ಮುಷ್ಕರ (ಸಂಗ್ರಹ ಚಿತ್ರ)
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಸಾರಿಗೆ ಮುಷ್ಕರ (ಸಂಗ್ರಹ ಚಿತ್ರ)

ಬೆಂಗಳೂರು: ಸಾರಿಗೆ ನೌಕರರ ತಮ್ಮ ಹಠ ಬಿಟ್ಟು ಬಂದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಸತತ ಮೂರು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಸಂಬಂಧ ಇಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಸಾರಿಗೆ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಢಿಯನ್ನುದ್ದೇಶಿಸಿ ಮಾತನಾಡಿದ ಅವರು, "ಸಾರಿಗೆ ನೌಕರರು ಹಠ ಬಿಟ್ಟು ಚರ್ಚೆಗೆ ಬಂದರೆ ಮಾತ್ರ ಸಮಸ್ಯೆ ಇತ್ಯರ್ಥವಾಗುತ್ತದೆ. ನೌಕರರು ಕೇಳುವಂತೆ ಶೇ.30 ವೇತನ ಪರಿಷ್ಕರಣೆ ಸಾಧ್ಯವೇ ಇಲ್ಲ. ಇಲಾಖೆ  ಪ್ರಸ್ತುತ ನಷ್ಟದಲ್ಲಿದೆ. ನಾನು ಇಲಾಖೆಯ ಜಬಾವ್ದಾರಿವಹಿಸಿಕೊಳ್ಳುವ ಮುನ್ನ ಕೂಡ ಇಲಾಖೆ ನಷ್ಟದಲ್ಲಿತ್ತು. ಈಗಲೂ ನಷ್ಟದಲ್ಲಿದೆ. ಆದರೆ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ.

ಇಲಾಖೆಯ ಹಣಕಾಸಿನ ಸ್ಥಿತಿಗತಿಯನ್ನು ನೌಕರರ ಒಕ್ಕೂಟಗಳೊಂದಿಗೆ ಚರ್ಚಿಸಿದ್ದೇವೆ ಮತ್ತು ನಮ್ಮ ಆರ್ಥಿಕ ಸ್ಥಿತಿಗತಿಯನ್ನು ವಿವರಿಸಿದ್ದೇವೆ. ಯಾವುದೇ ರೀತಿಯ ಒಣ ಪ್ರತಿಷ್ಠೆ ಮಾಡದೇ  ನಿಸ್ಪಕ್ಷಪಾತವಾಗಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಿದ್ದೇವೆ. ಕಳೆದ ಆರು ದಿನಗಳಿಂದ ಸತತವಾಗಿ ನೌಕಕರ ಒಕ್ಕೂಟದೊಂದಿಗೆ ಚರ್ಚೆ ನಡೆಸಿದ್ದೇವೆ. ನಮ್ಮ ಶಕ್ತಿಗನುಸಾರವಾಗಿ ಮತ್ತು  ಇಲಾಖೆಯ ಆರ್ಥಿಕ ಶಕ್ತಿಗನುಗುಣವಾಗಿ ವೇತನ ಹೆಚ್ಚಳ ಮಾಡಿದ್ದೇವೆ. ಆದರೂ ನೌಕರರು ಹಠ ಬಿಡದೇ ಮುಷ್ಕರ ನಡೆಸುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಪ್ಲಾನ್ ಎ ಸಫಲವಾಗದಿದ್ದರೆ ಪ್ಲಾನ್ ಬಿ ಕೂಡ ಸಿದ್ಧವಿದೆ
ಇದೇ ವೇಳೆ ನೌಕರರ ಮುಷ್ಕರ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರು, ನಮ್ಮ ಬಳಿ ಪ್ಲಾನ್ ಎ ಸಿದ್ಧವಿದೆ. ಅದು  ಸಫಲವಾಗದಿದ್ದರೆ ಪ್ಲಾನ್ ಬಿ ಕೂಡ ಸಿದ್ಧವಿದೆ ಎಂದು ಮಾರ್ಮಿಕವಾಗಿ ಹೇಳಿದರು. ಪ್ರಸ್ತುತ ತಾವು ನೌಕರರ ಒಕ್ಕೂಟದ ಮುಖಂಡರು ಹಾಗೂ ಅಧಿಕಾರಿಗಳ ಮಟ್ಟ ಸಭೆಯಲ್ಲಿ ಚರ್ಚೆ  ಮಾಡುತ್ತಿದ್ದು, ಅದು ಸಫಲವಾದರೆ ಸಿಎಂ ಸಿದ್ದರಾಮಯ್ಯರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು. ಅಂತೆಯೇ ಮತ್ತೊಮ್ಮೆ ನೌಕರರನ್ನು ಕರೆದು ಸಭೆ ನಡೆಸುವುದಾಗಿ ತಿಳಿಸಿದರು.

ಎಸ್ಮಾ ಜಾರಿಯಿಲ್ಲ; ನೌಕರರ ಮನವೊಲಿಕೆಗೆ ಪ್ರಯತ್ನ
ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಸರ್ಕಾರ ಎಸ್ಮಾ ಜಾರಿ ಮಾಡುವುದಿಲ್ಲ. ಬದಲಿಗೆ ಅವರನ್ನು ಮನವೊಲಿಸಿ ಕೆಲಸಕ್ಕೆ ಮರಳುವಂತೆ ಪ್ರಯತ್ನಿಸುತ್ತೇವೆ. ನೌಕರರು ಹಠ ಬಿಟ್ಟು ಚರ್ಚೆಗೆ  ಬಂದರೆ ಕೇವಲ ಅರ್ಧ ಗಂಟೆಯಲ್ಲಿ ಸಮಸ್ಯೆ ಬಗೆಹರಿಸಬಹುದು. 2012ರಲ್ಲೂ ಮುಷ್ಕರ ನಡೆದಿತ್ತು. ಆಗಲೂ ಚರ್ಚೆ ನಡೆಸಿ ಕೇವಲ 2 ದಿನದಲ್ಲಿ ಮುಷ್ಕರ ವಾಪಸ್ ಪಡೆಯುವಂತೆ  ಮಾಡಲಾಗಿತ್ತು. ಆಗ ಚರ್ಚೆಗೆ ಬಂದಿದ್ದ ನೌಕರರು ಈಗ ಹಠ ಮಾಡುತ್ತಿದ್ದಾರೆ. ನಿಗಮದಿಂದ ನಿಗಮಕ್ಕೆ ಸಿಬ್ಬಂದಿ ವರ್ಗಾವಣೆಗೆ ಅವಕಾಶವಿದೆ. ಆದರೆ ತಾಂತ್ರಿಕ ತೊಂದರೆಯಿಂದಾಗಿ ಇಲ್ಲಿ  ಸಮಸ್ಯೆ ಎದುರಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com