ಕರ್ನಾಟಕದತ್ತ ಹುತಾತ್ಮ ಯೋಧರ ಪಾರ್ಥೀವ ಶರೀರ, ಹುಟ್ಟೂರಿನಲ್ಲಿ ಅಂತ್ಯ ಸಂಸ್ಕಾರ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿ ವೇಳೆ ಹುತಾತ್ಮರಾದ ಕರ್ನಾಟಕದ ಯೋಧರ ಪಾರ್ಥೀವ ಶರೀರ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಮೃತ ದೇಹಗಳನ್ನು ಕರ್ನಾಟಕದತ್ತ ರವಾನಿಸಲಾಗಿದೆ.
ಹುತಾತ್ಮ ಯೋಧ ಹಸನ್ ಸಾಬ್ (ಸಂಗ್ರಹ ಚಿತ್ರ)
ಹುತಾತ್ಮ ಯೋಧ ಹಸನ್ ಸಾಬ್ (ಸಂಗ್ರಹ ಚಿತ್ರ)

ಬೆಂಗಳೂರು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿ ವೇಳೆ ಹುತಾತ್ಮರಾದ ಕರ್ನಾಟಕದ ಯೋಧರ ಪಾರ್ಥೀವ ಶರೀರ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಮೃತ  ದೇಹಗಳನ್ನು ಕರ್ನಾಟಕದತ್ತ ರವಾನಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಲ್ಲಿ ಉಗ್ರರು ಅಡಗಿಸಿಟ್ಟಿದ್ದ ಗ್ರೆನೇಡ್ ಸ್ಫೋಟಗೊಂಡ ಪರಿಣಾಮ ವೀರ ಮರಣವನ್ನಪ್ಪಿದ್ದ ಗೋಕಾಕ್ ತಾಲ್ಲೂಕಿನ ಖನಗಾವಿ ನಿವಾಸಿ ಬಸಪ್ಪ ಪಾಟೀಲ್  ಹಾಗೂ ನವಲಗುಂದ ತಾಲ್ಲೂಕಿನ ಸೈದಾಪುರ ನಿವಾಸಿ ಹಸನ್ ಸಾಬ್ ಅವರ ಪಾರ್ಥೀವ ಶರೀರ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಬೆಳಗ್ಗೆ 9 ಗಂಟೆಗೆ ಆಗಮಿಸಿದ ಯೋಧರ ಪಾರ್ಥೀವ  ಶರೀರವನ್ನು ಸೇನಾ ವಿಶೇಷ ವಾಹನದಲ್ಲಿ ಅವರವರ ಹುಟ್ಟೂರಿಗೆ ರವಾನಿಸಲಾಗಿದೆ.

ವೀರ ಯೋಧ ಬಸಪ್ಪ ಪಾಟೀಲ್ ಅವರ ಪಾರ್ಥೀವ ಶರೀರವನ್ನು ಹೊತ್ತು ಸಾಗಿರುವ ಯೋಧರ ಒಂದು ತಂಡ ರಸ್ತೆ ಮಾರ್ಗವಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಖನಗಾವಿಯತ್ತ  ತರಲಾಗುತ್ತಿದೆ. ಬೆಳಗ್ಗೆ ಸುಮಾರು 10 ಗಂಟೆಗೆ ಬಸಪ್ಪ ಪಾಟೀಲ್ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟು ಬಳಿಕ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು  ತಿಳಿದುಬಂದಿದೆ.

ಇನ್ನು ಮತ್ತೋರ್ವ ವೀರ ಯೋಧ ಹಸನ್ ಸಾಬ್ ಅವರ ಪಾರ್ಥೀವ ಶರೀವನ್ನು ಕೂಡ ಸೇನಾ ವಿಶೇಷವಾಹನದಲ್ಲಿ ಅವರ ಹುಟ್ಟೂರಾದ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ  ಸೈದಾಪುರ ಗ್ರಾಮಕ್ಕೆ ರವಾನಿಸಲಾಗಿದೆ. ಯೋಧನ ಪಾರ್ಥೀವ ಶರೀರ ಇಂದು ಧಾರವಾಡಕ್ಕೆ ಆಗಮಿಸಲಿದ್ದು, ಕಾರ್ಗಿಲ್ ಸ್ಥೂಪದಲ್ಲಿ ಹಸನ್ ಸಾಬ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ  ದರ್ಶನಕ್ಕೆ ಇಟ್ಟು ಬಳಿಕ ಸೈದಾಪುರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಸಂಜೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಇನ್ನು ಯೋಧನ ಸಾವಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಸಂತಾಪ ಸೂಚಿಸಿದ್ದು, ಮೃತ ಯೋಧನ ಕುಟುಂಬಕ್ಕೆ ಸಚಿವರು ವೈಯಕ್ತಿಕವಾಗಿ 1 ಲಕ್ಷ  ರೂಪಾಯಿಗಳ ಪರಿಹಾರ ನೀಡಿದರು. ಯೋಧ ಹಸನ್ ಸಾಬ ಖುದಾವಂದ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಶಾಸಕ ಸಿ.ಎಸ್.ಶಿವಳ್ಳಿ, ಶಾಸಕರಾದ  ಎನ್.ಹೆಚ್.ಕೋನರೆಡ್ಡಿ, ಶ್ರೀನಿವಾಸ ಮಾನೆ ಮುಂತಾದವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com