ರಜೆ ಪತ್ರಗಳನ್ನು ಹಿಂಪಡೆಯುತ್ತಿದ್ದಾರೆ ಪೊಲೀಸರು: ಗೃಹ ಸಚಿವ

ಇಲಾಖೆಗೆ ಸಲ್ಲಿಸಿರುವ ರಜೆ ಪತ್ರಗಳನ್ನು ಹಲವು ಪೊಲೀಸರು ಹಿಂಪಡೆಯುತ್ತಿದ್ದಾರೆಂದು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರು ಬುಧವಾರ ಹೇಳಿದ್ದಾರೆ...
ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ
ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ

ಬೆಂಗಳೂರು: ಇಲಾಖೆಗೆ ಸಲ್ಲಿಸಿರುವ ರಜೆ ಪತ್ರಗಳನ್ನು ಹಲವು ಪೊಲೀಸರು ಹಿಂಪಡೆಯುತ್ತಿದ್ದಾರೆಂದು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರು ಬುಧವಾರ ಹೇಳಿದ್ದಾರೆ.

ರಾಜ್ಯದ ಪೊಲೀಸ್ ಸಿಬ್ಬಂದಿಗಳು ಜೂ.4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಳಿಕ ಮಾತನಾಡಿರುವ ಅವರು, ಪ್ರತಿಭಟನೆಗೆ ಕುಮ್ಮಕ್ಕು ನೀಡಿದವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಪ್ರತಿಭಟನಾ ದಿನದಂದು ರಜೆಬೇಕೆಂದು ಈಗಾಗಲೇ ಇಲಾಖೆ ಸಲ್ಲಿಸಲಾಗಿರುವ ರಜೆ ಪತ್ರವನ್ನು ಹಲವು ಪೊಲೀಸರು ಹಿಂಪಡೆಯುತ್ತಿದ್ದಾರೆ. ಈ ಬಗ್ಗೆ ಹಲವು ಜಿಲ್ಲಾ ಪ್ರಧಾನಕಚೇರಿಗಳಿಂದ ವರದಿಗಳನ್ನು ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸ್ ಕಲ್ಯಾಣ ಸಂಘ 30 ಆಗ್ರಹಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಇದರಲ್ಲಿ 12 ಆಗ್ರಹಗಳನ್ನು ಸ್ವೀಕರಿಸಲಾಗಿದೆ. ಈ ಬಗ್ಗೆ ಪೊಲೀಸರಿಂದಲೂ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದೇವೆ. ಪೊಲೀಸರು ಸಾಮೂಹಿಕ ರಜೆ ತೆಗೆದುಕೊಳ್ಳಲು ಹೋಗುವುದಿಲ್ಲ. ಒಂದು ವೇಳೆ ಸಾಮೂಹಿಕ ರಜೆ ಪಡೆದಿದ್ದೇ ಆದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಸಿಬ್ಬಂದಿಗಳ ಬಳಿ ಮನವಿ ಮಾಡಲಾಗಿದೆ. ಶಿಸ್ತಿನ ಬಗ್ಗೆ ಪೊಲೀಸ್ ಇಲಾಖೆ ತಿಳಿದಿದೆ.

ಈ ಬಗ್ಗೆ ಸರ್ಕಾರ ಪೊಲೀಸರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆಯನ್ನು ನಡೆಸಲಿದೆ. ಜೂನ್ 4 ನಂತರ ಈ ಮಾತುಕತೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳ ಆಗ್ರಹಗಳನ್ನು ಈಡೇರಿಸಲು ಸರ್ಕಾರ ಸಮತಿಯೊಂದನ್ನು ರಚಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಕ್ರಮಬದ್ಧ ವ್ಯವಸ್ಥೆಯನ್ನು ನಿರ್ಮೂಲನೆಗೆ ಚಿಂತನೆ
ಇನ್ನು ಹಿರಿಯ ಪೊಲೀಸ್ ಅಧಿಕಾರಿಗಳ ನಿವಾಸದಲ್ಲಿ ಪೇದೆಗಳು ಕೆಲಸ ಮಾಡುವ ಕ್ರಮಬದ್ಧ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, ಅಂತಹ ಪೊಲೀಸ್ ಸಿಬ್ಬಂದಿಗೆ ಪರ್ಯಾಯ ಆಲೋಚನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com