ಬೆಂಗಳೂರು: 27 ವರ್ಷದ ಯುವತಿ ವರಿಸಿದ 64 ವರ್ಷದ ವೃದ್ಧ!

ಮಗಳ ವಯಸ್ಸಿನ ಯುವತಿಯನ್ನು ವರಿಸಿದ ಆರೋಪದ ಮೇರೆಗೆ 64 ವರ್ಷದ ವೃದ್ಧ ವರನನ್ನು ಸಾರ್ವಜನಿಕರು ಥಳಿಸಿದ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ...
ಕೃಪಾ ಹಾಗೂ ವೃದ್ಧ ವರ ಆಕಾಶ್ ಕುಮಾರ್
ಕೃಪಾ ಹಾಗೂ ವೃದ್ಧ ವರ ಆಕಾಶ್ ಕುಮಾರ್

ಬೆಂಗಳೂರು: ಹಣದ ಆಮಿಷವೊಡ್ಡಿ ಮಗಳ ವಯಸ್ಸಿನ ಯುವತಿಯನ್ನು ವರಿಸಿದ ಆರೋಪದ ಮೇರೆಗೆ 64 ವರ್ಷದ ವೃದ್ಧ ವರನನ್ನು ಸಾರ್ವಜನಿಕರು ಥಳಿಸಿದ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯ ಆವರಣದಲ್ಲಿ ಈ ಘಟನೆ ನಡೆದಿದ್ದು, 27 ವರ್ಷದ ಕೃಪಾ ಹೆಚ್ ಪ್ರಜಾಪತಿ ಎಂಬ ಯುವತಿ ಹಾಗೂ 64 ವರ್ಷದ ಡಾ.ಆಕಾಶ್ ಕುಮಾರ್ ಎಂಬ ವೃದ್ಧನನ್ನು ಸಾರ್ವಜನಿಕರು ಥಳಿಸಿದ್ದಾರೆ. ಕೃಪಾ ಹಾಗೂ ಡಾ.ಆಕಾಶ್ ಕುಮಾರ್ ಅವರು ಈ ಹಿಂದೆಯೇ ಮದುವೆಯಾಗಿದ್ದು, ಇಂದು ಮದುವೆ ಪ್ರಮಾಣ ಪತ್ರ ಸ್ವೀಕರಿಸಲು ಕಚೇರಿಗೆ ಆಗಮಿಸಿದ್ದ ವೇಳೆ ಅಲ್ಲಿಗೆ ಆಗಮಿಸಿದ್ದ ಯುವತಿ ಪೋಷಕರು ದಂಪತಿಗಳ ಮೇಲೆ ಹಲ್ಲೆ ಮಾಡಿದ್ದಾರೆ.

ಮೂಲಗಳ ಪ್ರಕಾರ ಹಸನ್ಮುಖ್ ಹೆಚ್ ಪ್ರಜಾಪತಿ ಅವರ ಪುತ್ರಿಯಾದ 27 ವರ್ಷದ ಕೃಪಾ ಹೆಚ್ ಪ್ರಜಾಪತಿ ಹೆಣ್ಣೂರು ಬಂಡೆಯಲ್ಲಿರುವ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಕ್ರಿಯೇಟಿವ್ ಸೆಂಟರ್  (ಎನ್ ಐಸಿಸಿ) ಕಾಲೇಜಿನಲ್ಲಿ ಇಂಟೀರಿಯಲ್ ಡಿಸೈನ್ (ಒಳಾಂಗಣ ವಿನ್ಯಾಸ) ವ್ಯಾಸಂಗ ಮಾಡುತ್ತಿದ್ದು, ಆದೇ ಕಾಲೇಜಿನ ಸಂಸ್ಥಾಪಕ 64 ವರ್ಷದ ಡಾ.ಆಕಾಶ್ ಕುಮಾರ್ ಅವರೊಂದಿಗೆ  ಕೃಪಾಗೆ ಪ್ರೀತಿ ಅಂಕುರವಾಗಿದೆ. ಈ ಬಗ್ಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇತ್ತೀಚೆಗೆ ಕೃಪಾ ಮತ್ತು ವೃದ್ಧ ಆಕಾಶ್ ಕುಮಾರ್ ರಹಸ್ಯವಾಗಿ ಮದುವೆಯಾಗಿದ್ದರಂತೆ. ಈ  ಹಿನ್ನಲೆಯಲ್ಲಿ ಇಂದು ದಂಪತಿಗಳು ರಾಜರಾಜೇಶ್ವರಿ ನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ಪ್ರಮಾಣ ಪತ್ರ ಸ್ವೀಕರಿಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ್ದ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮಕ್ಕಳಲ್ಲಿ ಪಕ್ಷಪಾತ ಮಾಡುತ್ತಿದ್ದ ತಂದೆ: ಕೃಪಾ ಆರೋಪ
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಯುವತಿ ಕೃಪಾ ಹೇಳಿರುವಂತೆ ತನ್ನ ತಂದೆ ಪ್ರಜಾಪತಿ ಅವರು ತನ್ನ ಮತ್ತು ತನ್ನ ಸಹೋದರನ ನಡುವೆ ಪಕ್ಷಪಾತ ಮಾಡುತ್ತಿದ್ದರು ಎಂದು  ಆರೋಪಿಸಿದ್ದಾರೆ. ನನ್ನ ತಮ್ಮನನ್ನು ಹೆಚ್ಚು ಪ್ರೀತಿಸುತ್ತಿದ್ದ ತಂದೆ ನನ್ನನ್ನು ನಿರ್ಲಕ್ಷಿಸುತ್ತಿದ್ದರು. ಹಲವು ದಿನಗಳ ಹಿಂದೆಯೇ ನನ್ನ ಪ್ರೀತಿ ವಿಚಾರ ನನ್ನ ಪೋಷಕರಿಗೆ ತಿಳಿಸಿದ್ದೆ ಆದರೆ ಅವರು  ವಿರೋಧಿಸಿದ ಕಾರಣ ನಾನೇ ನನ್ನ ಸ್ವಇಚ್ಛೆಯಿಂದ ಮದುವೆಯಾಗಿದ್ದೇನೆ ಎಂದು ಕೃಪಾ ಹೇಳಿದ್ದಾರೆ.

ಪುತ್ರಿ ಆರೋಪದಲ್ಲಿ ಹುರುಳಿಲ್ಲ ಎಂದ ತಂದೆ ಪ್ರಜಾಪತಿ
ಇನ್ನು ಪುತ್ರಿ ಕೃಪಾ ಅವರ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯುವತಿ ತಂದೆ ಹಸನ್ಮುಖ್ ಹೆಚ್ ಪ್ರಜಾಪತಿ ಅವರು ಪುತ್ರಿಯ ಆರೋಪದಲ್ಲಿ ಯಾವುದೇ ರೀತಿಯ ಸತ್ಯಾಂಶವಿಲ್ಲ.  ನನ್ನ ಮಗಳಿಗೆ ನಾನು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ. ಅವರ ಯಾವುದೇ ಆಸೆಗೂ ನಾನು ಅಡ್ಡಿ ಬಂದಿರಲಿಲ್ಲ. ಅವರ ಎಲ್ಲ ಆಸೆಗಳನ್ನು ಪೂರೈಸಿದ್ದೇನೆ. ಆದರೆ ಮಗಳಿಂದ ಇಂತಹ  ಆರೋಪಗಳು ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಪುತ್ರಿಯ ವಿಚಾರ ಕೇಳಿ ಅದರಲ್ಲೂ 64 ವರ್ಷದ ವೃದ್ಧನನ್ನು ಮದುವೆಯಾಗಿದ್ದಾಳೆ ಎಂಬ ವಿಚಾರ ಕೇಳಿ ನನ್ನ ಪತ್ನಿ ಆಘಾತಗೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಂದೆ ಹಸನ್ಮುಖ್ ಹೆಚ್ ಪ್ರಜಾಪತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com