

ಬೆಂಗಳೂರು: ನಗರದ ಹಲವೆಡೆ ಹಲವು ದಿನಗಳಿಂದ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಜೂನ್.8ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಮುಂಗಾರು ಪ್ರವೇಶ ಈ ಬಾರಿ ವಾಡಿಕೆಗಿಂತ ಮೂರ್ನಾಲ್ಕು ದಿನ ವಿಳಂಬವಾಗುತ್ತಿದ್ದು, ಜೂನ್. 8 ರಂದು ರಾಜ್ಯದ ಕರಾವಳಿ ಪ್ರವೇಶಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಳೆಯ ಅಬ್ಬರ ಈಗಾಗಲೇ ಕೊಂಚ ಮಟ್ಟಿಗೆ ನಗರದೆಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು, ನಗರದ ಹಲವೆಡೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿನ್ನೆ ಮಳೆಯಾಗಿದೆ. ಕೆ.ಜಿ ಹಳ್ಳಿ ಮತ್ತು ಕೆಂಗೇರಿ, ಬೆಂಗಳೂರು ದಕ್ಷಿಣದ ಹಲವು ಪ್ರದೇಶಗಳಲ್ಲಿ 12.5 ಮಿ.ಮೀ ಮತ್ತು 10.5 ನಷ್ಟು ಮಳೆಯಾಗಿದೆ. ರಾಜ್ಯದ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಗರಿಷ್ಠ ಮಟ್ಟ 84.8ಮಿ.ಮೀನಷ್ಟು ಮಳೆಯಾಗಿದೆ.
ತುಮಕೂರು, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಯ ಹಲವೆಡೆ 79.5ಮಿ.ಮೀ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ 69.5, ಚಿಕ್ಕಮಗಳೂರು ಜಿಲ್ಲೆಯ ಕಡೂರು 58.5 ಮಿಮೀ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ 50 ಮಿ.ಮೀ ನಷ್ಟು ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಅಬ್ಬರ ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳಲಿದೆ.
ನಿಟ್ಟುಸಿರುವ ಬಿಟ್ಟ ಬರ ಪೀಡಿತ ಪ್ರದೇಶಗಳು
ಬಿರು ಬೇಸಿಗೆಯಲ್ಲಿ ಸಾಕಷ್ಟು ಸಂಕಷ್ಟದದ್ದ ಉತ್ತರ ಕರ್ನಾಟಕ ಭಾಗದ ಪ್ರದೇಶಗಳು ಇದೀಗ ನಿಟ್ಟುಸಿರು ಬಿಡುತ್ತಿದೆ. ಮುಂಗಾರು ಪ್ರವೇಶಕ್ಕೆ ಇನ್ನು ಎರಡು ದಿನಗಳು ಬಾಕಿಯಿರುವಾಗಲೇ ಉತ್ತರ ಕರ್ನಾಟಕದಲ್ಲಿ ಹಲವು ದಿನಗಳಿಂದ ಹೆಚ್ಚಿನ ರೀತಿಯಲ್ಲಿ ಮಳೆಯಾಗುತ್ತಿದೆ.
ಮೇ.20ರಿಂದಲೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಕಳೆದ ವರ್ಷದಿಂದ ಬರಗಾಲದಿಂದ ಕೆಂಗೆಟ್ಟಿದ್ದ ರೈತರಿಗೆ ಮಳೆರಾಯ ಸಹಾಯಕವಾಗಿದ್ದಾನೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ವಿಜ್ಞಾನಿ ಎಸ್.ಎಸ್.ಎಂ.ಗವಾಸ್ಕರ್ ಅವರು ಹೇಳಿದ್ದಾರೆ.