
ಬೆಂಗಳೂರು: 64 ವರ್ಷದ ವೃದ್ಧನನ್ನು ವಿವಾಹವಾಗುವ ಮೂಲಕ ತೀವ್ರ ಸುದ್ದಿಗೆ ಗ್ರಾಸವಾಗಿದ್ದ 27 ವರ್ಷದ ಯುವತಿ ಕೃಪಾ ಇದೀಗ ತನ್ನ ಪೋಷಕರ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಕಳೆದ ವಾರ ರಾಜರಾಜೇಶ್ವರಿ ನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ 64 ವರ್ಷದ ತನ್ನ ಪತಿ ಡಾ. ಆಕಾಶ್‌ಕುಮಾರ್ ಅವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ಪತ್ನಿ ಕೃಪಾ ಹೆಚ್ ಪ್ರಜಾಪತಿ ತಂದೆ ಹಸನ್ಮುಖ್ ಪ್ರಜಾಪತಿ ಮತ್ತು ತಾಯಿ ಸ್ಮಿತಾ ವಿರುದ್ಧ ದೂರು ದಾಖಲಿಸಿದ್ದಾರೆ. ಪತಿ ಮೇಲೆ ಹಲ್ಲೆ ನಡೆಸಿರುವ ತನ್ನ ಪಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೃಪಾ ಹೆಚ್ ಪ್ರಜಾಪತಿ ನಿನ್ನೆ ರಾಜರಾಜೇಶ್ವರಿನಗರದ ಪೊಲೀಸ್ ಠಾಣೆ ಯ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಹೆಣ್ಣೂರು ಬಂಡೆಯಲ್ಲಿರುವ ಖಾಸಗಿ ಕಾಲೇಜು ಸಂಸ್ಥಾಪಕ ಡಾ. ಆಕಾಶ್ ಕುಮಾರ್ ಹಾಗೂ ಇದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕೃಪಾ ಅವರನ್ನು ಪ್ರೀತಿಸಿ ರಹಸ್ಯವಾಗಿ ವಿವಾಹವಾಗಿದ್ದರು. ದಂಪತಿ ವಿವಾಹ ನೋಂದಣಿ ಮಾಡಿಸಲು ನಿರ್ಧರಿಸಿ, ಕಳೆದ ವಾರ ರಾಜರಾಜೇಶ್ವರಿ ನಗರ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೃಪಾ ಪಾಲಕರಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ, ಜೂನ್ 3ರಂದು ಮಾತುಕತೆಗಾಗಿ ಸಬ್‌ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು ಆಕಾಶ್‌ಕುಮಾರ್ ದಂಪತಿ ಹಾಗೂ ಕೃಪಾ ಪಾಲಕರಿಗೆ ನೋಟಿಸ್ ಜಾರಿ ಮಾಡಿದ್ದರು. ಜೂನ್ 3ರಂದು ಮಾತುಕತೆಗಾಗಿ ಆಗಮಿಸಿದಾಗ, ಕೃಪಾ ಪಾಲಕರು ಹಾಗೂ ಸ್ಥಳೀಯರು ಜಗಳ ತೆಗೆದು ಆಕಾಶ್ ಅವರನ್ನು ಥಳಿಸಿದ್ದರು.
ಈ ಘಟನೆ ಸಂಬಂಧ ತಂದೆ ಪ್ರಜಾಪತಿ ಹಾಗೂ ತಾಯಿ ಸ್ಮಿತಾ ಅವರ ವಿರುದ್ಧ ಕೃಪಾ ದೂರು ದಾಖಲಿಸಿದ್ದಾರೆ. ಅಲ್ಲದೆ ಕೃಪಾ ಪೋಷಕರಾದ ಪ್ರಜಾಪತಿ ದಂಪತಿ ಬಂಧನಕ್ಕೆ ಕೋರ್ಟ್ ಅನುಮತಿ ಕೇಳಲಾಗಿದೆ. ವಾರೆಂಟ್ ಜಾರಿಯಾದ ನಂತರ ವಶಕ್ಕೆ ಪಡೆಯಲಾಗುವುದು ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಪ್ರಜಾಪತಿ ದಂಪತಿ ಸೆಷನ್ಸ್ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
Advertisement