
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರು ಪ್ರತ್ಯೇಕ ಪರೇಡ್ ನಡೆಸಿದ್ದು, ಮಹಿಳೆ ಪೊಲೀಸ್ ಸಿಬ್ಬಂದಿಗಳಿಗೆ ಪ್ರತ್ಯೇಕ ಉತ್ತಮ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿ ಆಡುಗೋಡಿ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಮೈದಾನದಲ್ಲಿ ಶುಕ್ರವಾರ ನಡೆದ ‘ಮಹಿಳಾ ಪೊಲೀಸರ ಪ್ರತ್ಯೇಕ ಪರೇಡ್’ನಲ್ಲಿ ಸುಮಾರು 125 ಮಹಿಳಾ ಸಿಬ್ಬಂದಿ ಹಾಜರಾಗಿದ್ದರು. ಬೆಳಿಗ್ಗೆ 7ಕ್ಕೆ ಆರಂಭವಾದ ಪರೇಡ್‌ನಲ್ಲಿ ಪೂರ್ವ, ಆಗ್ನೇಯ ಮತ್ತು ಈಶಾನ್ಯ ವಿಭಾಗದ ಠಾಣೆಗಳು ಮತ್ತು ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ದೂರುಗಳನ್ನು ಹಿರಿಯ ಅಧಿಕಾರಿಗಳ ಎದುರು ಹೇಳಿಕೊಂಡರು.
ಮಹಿಳಾ ಸಿಬ್ಬಂದಿಗಳಿಂದ ದೂರು ಸ್ವೀಕರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ಅವರು, ಮಹಿಳಾ ಸಬ್ ಇನ್‌ಸ್ಪೆಕ್ಟರ್, ಸಹಾಯಕ ಸಬ್ ಇನ್‌ಸ್ಪೆಕ್ಟರ್, ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳು ಪರೇಡ್‌ಗೆ ಬಂದು ಶಿಸ್ತುಬದ್ಧ ಪಥಸಂಚಲನ ನಡೆಸಿಕೊಟ್ಟರು. ಜತೆಗೆ ಅವರ ದೂರು ಕೂಡ ಆಲಿಸಲಾಯಿತು’ ಎಂದು ತಿಳಿಸಿದರು.
"ಪ್ರತಿಯೊಬ್ಬರನ್ನು ತಾವು ವೈಯುಕ್ತಿಕವಾಗಿ ಮಾತನಾಡಿಸಿದಾಗ ಎಲ್ಲರೂ ತಮ್ಮ-ತಮ್ಮ ದೂರು ಹೇಳಿಕೊಂಡರು. ಭತ್ಯೆ, ವೇತನ, ಕ್ವಾಟರ್ಸ್ ನಿರ್ವಹಣೆ ಹಾಗೂ ಪ್ರಮುಖವಾಗಿ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಕುರಿತು ಹೆಚ್ಚಿನ ದೂರುಗಳು ಬಂದಿವೆ ಎಂದು ಅವರು ಹೇಳಿದರು.
ಪರೇಡ್‌ನಲ್ಲಿ ದೂರು ಹೇಳಿಕೊಂಡ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಒಬ್ಬರು, ‘ರಾತ್ರಿ, ಹಗಲು ಎನ್ನದೇ ಹೊರಗಡೆ ಕರ್ತವ್ಯಕ್ಕೆ ನಮ್ಮನ್ನು ನಿಯೋಜಿಸಲಾಗುತ್ತದೆ. ಹೋದಲೆಲ್ಲ ಶೌಚಾಲಯವಿರುವುದಿಲ್ಲ, ಮಲಗಲು ಜಾಗವಿರುವುದಿಲ್ಲ. ಅದು ಮಹಿಳೆಯರಿಗೆ ಮುಜುಗುರವನ್ನುಂಟು ಮಾಡುತ್ತದೆ. ಇದಕ್ಕೆ ಮೊದಲು ಪರಿಹಾರ ಸೂಚಿಸಬೇಕು’ ಎಂದು ಹರಿಶೇಖರನ್ ಅವರಲ್ಲಿ ವಿನಂತಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಹರಿಶೇಖರನ್, ‘ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು. ಅಂತೆಯೇ "ಹೊರ ರಾಜ್ಯಕ್ಕೆ ಆರೋಪಿಗಳ ಪತ್ತೆಗೆ ಹೋಗುವ ವೇಳೆ ಮಹಿಳಾ ಸಿಬ್ಬಂದಿ ಅನುಭವಿಸುವ ತೊಂದರೆ ಕುರಿತು ಪರೇಡ್‌ನಲ್ಲಿ ಪಾಲ್ಗೊಂಡಿದ್ದ ಕಾನ್‌ಸ್ಟೆಬಲ್ ಒಬ್ಬರು ವಿವರಿಸಿದರು. ಭಾಷೆ ಸಮಸ್ಯೆ ಹಾಗೂ ಸ್ಥಳೀಯರಿಂದ ಎದುರಾಗುವ ತೊಂದರೆ ಕುರಿತು ಅವರು ಹೇಳಿಕೊಂಡಿದ್ದಾರೆ ಎಂದು ಹರಿಶೇಖರನ್ ತಿಳಿಸಿದರು.
ಮಹಿಳಾ ಪೊಲೀಸರ ಸಮಸ್ಯೆಗಳ ಕುರಿತಂತೆ ಸಕಾರಾತ್ಮಕವಾಗಿ ಸ್ಪಂಧಿಸಿದ ಹರಿಶೇಖರನ್ ಅವರು, ಮುಂದಿನ ದಿನಗಳಲ್ಲಿ ಹೊರರಾಜ್ಯಕ್ಕೆ ಹೋಗುವ ಮಹಿಳಾ ಸಿಬ್ಬಂದಿ ಜತೆ ಪುರುಷ ಸಿಬ್ಬಂದಿ ಅಥವಾ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಯನ್ನು ಕಳುಹಿಸಲು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
Advertisement