

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದ್ದು, ಗುರುವಾರ ನಗರದ ಪ್ರತಿಷ್ಠಿತ ವಿಜಯನಗರದ ಕಾಫಿ ಡೇ ಮಳಿಗೆ ಅಂಗಳದಲ್ಲೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈಯ್ಯಲಾಗಿದೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ವಿುಗಳ ತಂಡ ರಿಯಲ್ ಎಸ್ಟೇಟ್ ಏಜೆಂಟ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದೆ. ಯಶವಂತಪುರ ನಿವಾಸಿ ಮಹೇಶ್ ಅಲಿಯಾಸ್ ಮೋಟು (30) ಕೊಲೆಯಾದ ವ್ಯಕ್ತಿಯಾಗಿದ್ದು, ನಿನ್ನೆ ತನ್ನ ಸ್ನೇಹಿತನೊಂದಿಗೆ ವಿಜಯನಗರದ ಕಾಫಿ ಡೇ ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅಲ್ಲಿಗೆ ನುಗ್ಗಿದ ದುಷ್ಕರ್ಮಿಗಳ ತಂಡ ನೋಡ-ನೋಡುತ್ತಿದ್ದಂತೆಯೇ ಮಹೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ಆತನೊಂದಿಗಿದ್ದ ಆತನ ಸ್ನೇಹಿತ ರಕ್ಷಿತ್ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ತೀವ್ರ ಹಲ್ಲೆಗೆ ಒಳಗಾದ ರಕ್ಷಿತ್ ನನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಆಸ್ಪತ್ರೆ ಮೂಲಗಳು ತಿಳಿಸಿರುವಂತೆ ಆತನ ಸ್ಥಿತಿಯೂ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ ಗುರುವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ವಿಜಯನಗರದ ಮನುವನ ಸಮೀಪದ ಕಾಫಿ ಡೇನಲ್ಲಿ ಮಹೇಶ್ ಮತ್ತು ರಕ್ಷಿತ್ ಕಾಫಿ ಸೇವಿಸುತ್ತಿದ್ದಾಗ ಅಲ್ಲಿಗೆ ಆಗಮಿಸಿಗ ನಾಲ್ಕು ಮಂದಿ ದುಷ್ಕರ್ವಿುಗಳು ಈ ಕೃತ್ಯವೆಸಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತನಿಗೂ ಇದೆ ಅಪರಾಧ ಹಿನ್ನಲೆ
ಪೊಲೀಸ್ ಮೂಲಗಳ ಪ್ರಕಾರ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಮಹೇಶ್ ವಿರುದ್ಧ 2011ರಲ್ಲಿ ಯಶವಂತಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ರೌಡಿಗಳಾದ ಚೋಳರಪಾಳ್ಯದ ಚೈನಾ ಹಾಗೂ ಮಾಗಡಿ ರಸ್ತೆಯ ಹರ್ಷ ಗುಂಪುಗಳ ನಡುವೆ ಮನಸ್ತಾಪ ಉಂಟಾಗಿ ಪರಸ್ಪರ ಕಾದಾಟದಲ್ಲಿ ತೊಡಗಿದ್ದರು. ಏಪ್ರಿಲ್ 20ರಂದು ವಿಜಯನಗರದ ಪೈಪ್ಲೈನ್ ರಸ್ತೆಯಲ್ಲಿ ಚೈನಾ ಸಹಚರರು ಹರ್ಷನನ್ನು ಹತ್ಯೆ ಮಾಡಿದ್ದರು. ಈ ಕೃತ್ಯಕ್ಕೆ ಮಹೇಶ್ ಆರ್ಥಿಕ ನೆರವು ನೀಡಿದ್ದ ಎಂದು ಹರ್ಷ ಸಹಚರರು ಮಹೇಶ್ ಕೊಲೆಗೆ ಸಂಚು ರೂಪಿಸಿದ್ದರು.
ಮಹೇಶ್ ಚಲನವಲನಗಳ ಮೇಲೆ ನಿಗಾವಹಿಸಿದ್ದ ಹಂತಕರು, ಗುರುವಾರ ರಾತ್ರಿ ಕಾಫಿ ಡೇಗೆ ಬಂದಾಗ ದಾಳಿ ನಡೆಸಿದ್ದಾರೆ. ಮಹೇಶನ ರಕ್ಷಣೆಗೆ ಬಂದ ರಕ್ಷಿತ್ ಮೇಲೂ ಮಾರಕಾಸ್ತ್ರ ಬೀಸಿ ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟೊತ್ತಿಗೆ ಮಹೇಶ್ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.