ಮುಂದುವರೆದ ಪ್ರಸಾದ್ ಪರ ಪ್ರತಿಭಟನೆ: ಪೊಲೀಸರ ಮನವೊಲಿಕೆ ಯತ್ನ ವಿಫಲ
ಮೈಸೂರು: ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವು ಇದೀಗ ಸಾಮಾನ್ಯ ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತೆ ಮಾಡಿದೆ.
ಪ್ರಸಾದ್ ಅವರನ್ನು ಕೈಬಿಟ್ಟ ಕಾರಣ ಮೈಸೂರಿನಾದ್ಯಂತ ಹಲವೆಡೆ ಪ್ರತಿಭಟನೆಗಳು ಮುಂದುವರೆದಿದ್ದು, ಕೊಳ್ಳೇಗಾಲದಲ್ಲಿ ಸಾಕಷ್ಟು ಮಂದಿ ಈಗಲೂ ಹಲವು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿರುವುದರಿಂದ ಇಲ್ಲಿನ ಸಾಮಾನ್ಯ ಜನರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ಬಂದ್ ಹಿಂಪಡೆಯುವಂತೆ ಪ್ರತಿಭಟನಾನಿರತರ ಬಳಿ ಪೊಲೀಸರು ಸಾಕಷ್ಟು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದಲ್ಲದೆ, ಸ್ಥಳೀಯ ವ್ಯಾಪಾರಸ್ಥರ ಮುಖ್ಯಸ್ಥರು ಕೂಡ ಪೊಲೀಸರು ಭದ್ರತೆ ನೀಡಲು ಸಿದ್ಧರಿದ್ದು, ಅಂಗಡಿಗಳನ್ನು ತೆರೆಯುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಸ್ಥಳೀಯ ಕೆಲ ದಲಿತ ಸಂಘಟನೆಗಳು, ವ್ಯಾಪಾರಸ್ಥರು, ಕನ್ನಡಿಗ ಸಂಘಟನೆಗಳು ಹಾಗೂ ಇನ್ನಿತರೆ ಸಂಘಟನೆಗಳು ಈ ಮನವಿಗಳನ್ನು ತಿರಸ್ಕರಿಸುತ್ತಿದ್ದು, ಶ್ರೀನಿವಾಸ ಪ್ರಸಾದ್ ಅವರನ್ನು ಸಂಪುಟದಲ್ಲಿ ಸೇರ್ಪಡೆಗೊಳಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿಕೊಂಡಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ