
ಬೆಂಗಳೂರು: ಮಕ್ಕಳನ್ನು ಕದ್ದು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕಳ್ಳಸಾಗಣೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇಧಿಸಿದ್ದು, ಪ್ರಕರಣ ಸಂಬಂಧ ಇಬ್ಬರು ಕಳ್ಳ ಸಹೋದರಿಯರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಕ್ಕಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡಿದ ಆರೋಪದ ಮೇರೆಗೆ ಸಂಗೀತಾ ಪ್ರಕಾಶ್ (45 ವರ್ಷ) ಮತ್ತು ಆಕೆಯ ಸಹೋದರಿ ಶ್ರೀಲತಾ (35 ವರ್ಷ) ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮೂಲಗಳ ಪ್ರಕಾರ ಆರೋಪಿ ಸಂಗೀತಾ ಪ್ರಕಾಶ್ ಎಂಎನ್ ಸಿ ಕಂಪನಿಯ ಉದ್ಯೋಗಿಯಾಗಿದ್ದು, ಕೆಲಸದ ನಿಮಿತ್ತ ವಿದೇಶಕ್ಕೆ ಹೋಗುವ ನೆಪದಲ್ಲಿ ಮಕ್ಕಳನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಮತ್ತು ಇದಕ್ಕಾಗಿ ಈಕೆ ಭರ್ಜರಿ ಹಣವನ್ನು ತೆಗೆದುಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಆಕೆಯೇ ಬಾಯಿ ಬಿಟ್ಟಿರುವಂತೆ ಬೆಂಗಳೂರಿನಿಂದ ನ್ಯೂಯಾರ್ಕ್ ಗೆ ಹೋಗುವಲ ಪ್ರತಿ ಟ್ರಿಪ್ ಗೆ ಆಕೆ ಸುಮಾರು 2 ಲಕ್ಷ ಹಣ ಪಡೆಯುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಈಕೆ ಕಳ್ಳಸಾಗಣೆ ಮಾಡುತ್ತಿದ್ದ ಮಕ್ಕಳ ಜನ್ಮ ಪ್ರಮಾಣಪತ್ರವನ್ನು ಕೂಡ ನಕಲು ಮಾಡುತ್ತಿದ್ದ ಸಂಗೀತಾ ಆಕೆಯೇ ಮಕ್ಕಳ ತಾಯಿ ಎಂದು ಹೇಳಿ ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಮಕ್ಕಳನ್ನು ವಿದೇಶಕ್ಕೆ ಕರೆದೊಯ್ದು ಮಾರಾಟ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. 2014 ನವೆಂಬರ್ 12 ರಂದು ಈಕೆ ನ್ಯೂಯಾರ್ಕ್ ಪ್ರಯಾಣ ಮಾಡಿದ ಕುರಿತು ದಾಖಲೆ ಸಂಗ್ರಹಿಸಿರುವ ಪೊಲೀಸರು ಈಕೆಯೊಂದಿಗೆ ಇಬ್ಬರು ಮಕ್ಕಳು ಕೂಡ ಪ್ರಯಾಣ ಮಾಡಿದ್ದರು ಎಂಬ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ. ಮಕ್ಕಳ ತಾಯಿಯಾಗಿ ಸಂಗೀತ ಮತ್ತು ತಂದೆಯಾಗಿ ಆಕೆಯ ಗಂಡ ಇರುವ ಕುರಿತು ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ವಿಸಾ ಮತ್ತು ಪಾಸ್ ಪೋರ್ಟ್ ಪಡೆದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಂದು ಮಹತ್ವದ ಅಂಶವೆಂದರೆ ಸಂಗೀತಾ ಪ್ರಯಾಣ ಮಾಡಿದ ಅದೇ ದಿನವೇ ಆಕೆಯ ಸಹೋದರಿ ಶ್ರೀಲತಾ ಕೂಡ ಇಬ್ಬರು ಮಕ್ಕಳನ್ನು ನ್ಯೂಯಾರ್ಕ್ ಗೆ ಕಳ್ಳಸಾಗಣೆ ಮಾಡಿದ್ದ ಅಂಶವನ್ಮು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಬ್ಬರು ಸಹೋದರಿಯರು ಮಕ್ಕಳ್ಳ ಕಳ್ಳಸಾಗಣೆ ದಂಧೆಯಲ್ಲಿ ತೊಡಗಿದ್ದು, ಇವರಿಬ್ಬರ ಹಿಂದೆ ದೊಡ್ಡ ಜಾಲವೇ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಇಬ್ಬರ ಮನೆಯಲ್ಲಿಯೂ ಪೊಲೀಸರು ಶೋಧ ನಡೆಸಿದ್ದು, ಬೆಂಗಳೂರಿನ ಮಾರತ್ ಹಳ್ಳಿಯಲ್ಲಿರುವ ಸಂಗೀತಾ ಮನೆ ಮತ್ತು ಕಸ್ತೂರಿನಗರದಲ್ಲಿರುವ ಆಕೆಯ ಸಹೋದರಿ ಶ್ರೀಲತಾ ಮನೆಯಲ್ಲಿ ಪೊಲೀಸರು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಇಬ್ಬರು ಸಹೋದರಿಯರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳ ದಾಖಲಾಗಿದ್ದು, ರಾಮಮೂರ್ತಿ ನಗರ ಪೊಲೀಸರು ಮಕ್ಕಳ ಕಳ್ಳ ಸಾಗಣೆ ಸಂಬಂಧ ಸಹೋದರಿಯರನ್ನು ಬಂಧಿಸಿದ್ದಾರೆ. ಅಂತೆಯೇ ಇದೇ ಪ್ರಕರಣ ಸಂಬಂಧ ಶಿವಾಜಿನಗರ ಪೊಲೀಸರು 43 ವರ್ಷದ ಸಿಎನ್ ಪ್ರವೀಣ್ ಎಂಬಾತನನ್ನು ಬಂಧಿಸಿದ್ದು, ಈತ ಕೂಡ ಇದೇ ಜಾಲದವನೆಂದು ಹೇಳಲಾಗುತ್ತಿದೆ. ಬಂಧಿತ ಪ್ರವೀಣ್ ಸಂಗೀತ್ ಮತ್ತು ಶ್ರೀಲತಾ ಸಹೋದರಿಯರಿಗೆ ಮಕ್ಕಳ ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿಕೊಡುತ್ತಿದ್ದ ಎಂದು ಹೇಳಲಾಗುತ್ತಿದೆ. ಪ್ರವೀಣ್ ಬಂಧನದೊಂದಿಗೆ ಕಳ್ಳಸಾಗಣೆ ಪ್ರಕರಣ ಸಂಬಂಧ ಈ ವರೆಗೂ 12 ಮಂದಿಯನ್ನು ಬಂಧಿಸಿದಂತಾಗಿದೆ.
ಸಹೋದರಿಯರಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ
ಇದೇ ವೇಳೆ ಪ್ರಕರಣ ಸಂಬಂಧ ಜಾಮೀನು ಕೋರಿ ಸಂಗೀತಾ ಮತ್ತು ಶ್ರೀಲತಾ ಸಹೋದರಿಯರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇಂತಹ ಹೀನ ಕೃತ್ಯದಲ್ಲಿ ಪಾಲ್ದೊಳ್ಳುವವರಿಗೆ ಜಾಮೀನು ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಸಿಟಿ ಸಿವಿಲ್ ಕೋರ್ಟ್ ನ 57ನೇ ಹೆಚ್ಚುವರಿ ನ್ಯಾಯಮೂರ್ತಿ ಬಿಎಸ್ ರೇಖಾ ಅವರು, ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಜಾಮೀನು ನೀಡಿದರೆ ಸಮಾಜದಲ್ಲಿ ಇಂತಹ ಹೀನ ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement