
ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಆಶ್ವಾಸನೆ ಮೂಲಕ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಇದೀಗ ಭ್ರಷ್ಟಾಚಾರ ಪ್ರಕರಣಗಳ ತನಿಖೆಗಾಗಿ ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳ, ಜಾಗೃತ ಕೋಶ ಮತ್ತು ಜಾಗೃತ ಸಲಹಾ ಮಂಡಳಿ ಸ್ಥಾಪನೆ ಮೂಲಕ ಪರೋಕ್ಷವಾಗಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವತ್ತ ಸಾಗಿದೆಯೇ ಎಂಬ ಅನುಮಾನ ಮೂಡತೊಡಗಿದೆ.
ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಿಂದಾಗಿ ಲೋಕಾಯುಕ್ತ ಸಂಸ್ಥೆ ಹೇಗೆ ದುರ್ಬಲವಾಗುತ್ತದೆ? ಮತ್ತು ಭ್ರಷ್ಟಾಚಾರದ ವಿರುದ್ಧದ ತನಿಖೆ ಹೇಗೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂಬ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಒಂದಷ್ಟು ಅಂಶಗಳು ಇಲ್ಲಿವೆ.
ಎಸಿಬಿ ರಚನೆ ವೇಳೆ ಸರ್ಕಾರದ ಏಕಪಕ್ಷೀಯ ನಿರ್ಧಾರ
ಎಸಿಬಿ ರಚನೆ ವೇಳೆ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರು ಅಥವಾ ಪ್ರತಿಪಕ್ಷಗಳನ್ನಿರಲಿ ಸ್ವತಃ ತನ್ನದೇ ಪಕ್ಷದ ಶಾಸಕಾಂಗ ಸಭೆಯಲ್ಲಿಯೇ ಯಾವುದೇ ಚರ್ಚೆ ಮಾಡದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ ಮತ್ತು ಎಸಿಬಿ ರಚನೆ ವೇಳೆ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದಂತೆ ಮೂಲ ತತ್ವವನ್ನೇ ಪಾಲಿಸಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ವಿಚಾರಣೆಯ ಜವಾಬ್ದಾರಿಯಲ್ಲಿನ ಗೊಂದಲ
ಎಸಿಬಿ ರಚನೆಯಿಂದಾಗಿ ಭ್ರಷ್ಟರ ವಿರುದ್ಧ ತನಿಖೆಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದ್ದು, ರಾಜಕಾರಣಿಗಳ ವಿರುದ್ಧದ ಭ್ರಷ್ಟಾಚಾರ ಆರೋಪದ ತನಿಖೆಯನ್ನು ಯಾರು ಮತ್ತು ಯಾವ ರೀತಿ ನಡೆಸಬೇಕೆ ಎಂಬ ಬಗ್ಗೆಯೂ ಗೊಂದಲ ಸೃಷ್ಟಿಮಾಡುತ್ತದೆ.
ಸರ್ಕಾರದ ಅಧೀನ ಸಂಸ್ಥೆಯಿಂದ ವಸ್ತು ನಿಷ್ಠ ತನಿಖೆ ಸಾಧ್ಯವೇ ಎಂಬ ಗೊಂದಲ
ಭ್ರಷ್ಟಾಚಾರದ ಬಗ್ಗೆ ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬ ಕಾರಣಕ್ಕಾಗಿಯೇ ಲೋಕಾಯುಕ್ತದಲ್ಲಿ ಪೊಲೀಸ್ ವಿಭಾಗ ಆರಂಭಿಸಿ ಅದಕ್ಕೆ ಪೊಲೀಸ್ ಠಾಣೆ ಅಧಿಕಾರ ನೀಡಲಾಯಿತು. ಶಾಸಕಾಂಗ ಮತ್ತು ಕಾರ್ಯಾಂಗದ ಯಾರೇ ಆಗಲಿ, ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದರೆ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಲೋಕಾಯುಕ್ತರ ಮೇಲ್ವಿಚಾರಣೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ, ಇದೀಗ ಸರ್ಕಾರ ಎಸಿಬಿ ರಚನೆ ಮಾಡಿರುವುದರಿಂದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಸರ್ಕಾರದ ಮೂಗಿನ ಕೆಳಗೇ ತನಿಖೆ ನಡೆಸಬೇಕಾಗುತ್ತದೆ.
ಲೋಕಾಗೆ ನೀಡಿದ್ದ ಠಾಣೆ ಅಧಿಕಾರ ಎಸಿಬಿಗೆ ರವಾನೆ
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತಗೆ ಪ್ರತ್ಯೇಕ ಠಾಣೆ ಅಧಿಕಾರ ನೀಡಲಾಗಿತ್ತು. ಆದರೆ ಈಗ ಎಸಿಬಿ ರಚನೆ ಬಳಿಕೆ ಠಾಣಾಧಿಕಾರ ಲೋಕಾಯುಕ್ತದಿಂದ ಎಸಿಬಿಗೆ ರವಾನೆಯಾಗುತ್ತದೆ. ಹೀಗಾಗಿ ಲೋಕಾಯುಕ್ತ ಪೊಲೀಸರು ಯಾವುದೇ ತನಿಖೆ ನಡೆಸಬೇಕಿದ್ದರೆ ಎಫ್ಐಆರ್ ದಾಖಲಿಸಲು ಪೊಲೀಸ್ ಠಾಣೆಗಳನ್ನು ಅವಲಂಬಿಸಬೇಕು. ಅಲ್ಲಿಗೆ ಲೋಕಾಯುಕ್ತ ಸಂಸ್ಥೆಯ ಪ್ರಮುಖ ತನಿಖಾ ವಿಭಾಗವಾಗಿರುವ ಲೋಕಾಯುಕ್ತ ಪೊಲೀಸರಿಗೆ ಅಧಿಕಾರ ಇಲ್ಲದಂತಾಗುತ್ತದೆ.
ಸ್ವತಂತ್ರ್ಯ ಅಧಿಕಾರವಿಲ್ಲದ ಎಸಿಬಿ ಮುಖ್ಯಸ್ಥರು
ಭ್ರಷ್ಟಾಚಾರ ನಿಗ್ರಹ ದಳಕ್ಕೆ ಎಡಿಜಿಪಿ ದರ್ಜೆಯ ಅಧಿಕಾರಿ ಮುಖ್ಯಸ್ಥರಾಗಿದ್ದರೂ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹ ಇಲಾಖೆಯ ಅಧೀನದಲ್ಲಿ ಬರುತ್ತಾರೆ. ಹೀಗಾಗಿ ಅವರಿಗೆ ಸ್ವತಂತ್ರ ಅಧಿಕಾರ ಇಲ್ಲ. ಎಲ್ಲಾ ಇಲಾಖೆಗಳಲ್ಲಿ ಜಾಗೃತ ಕೋಶ ರಚಿಸಲಾಗುತ್ತಿದೆಯಾದರೂ ಅದರ ಮೇಲುಸ್ತುವಾರಿ ನಡೆಸುವುದು ಸರ್ಕಾರದ ಒಂದು ಭಾಗವಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳು. ಸರ್ಕಾರದ ಆಡಳಿತ ಮುಖ್ಯಸ್ಥರಾಗಿರುವ ಮುಖ್ಯ ಕಾರ್ಯದರ್ಶಿಗಳೇ ಜಾಗೃತ ಸಲಹಾ ಮಂಡಳಿಯ ಮುಖ್ಯಸ್ಥರಾಗಿರುತ್ತಾರೆ. ಹೀಗಾಗಿ ಈ ಅಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿ, ಸಿಬ್ಬಂದಿ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಪ್ರಶ್ನೆ ಮೂಡುತ್ತದೆ.
ಪ್ರಕರಣದ ಮೇಲೆ ರಾಜಕೀಯ ಪ್ರಭಾವ ಸಾಧ್ಯತೆ
ಸರ್ಕಾರಿ ನೌಕರರು ಅಥವಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಬಗ್ಗೆ ಲೋಕಾಯುಕ್ತರಿಗೆ ದೂರು ಬಂದರೆ ಅಥವಾ ಭ್ರಷ್ಟ ಅಧಿಕಾರಿಗಳ ಬಗ್ಗೆ ಮಾಹಿತಿ ಬಂದರೆ ಅವರು ಲೋಕಾಯುಕ್ತ ಪೊಲೀಸರ ಮೂಲಕ ತನಿಖೆ ಅಥವಾ ದಾಳಿ ನಡೆಸುತ್ತಾರೆ. ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮಾಡಿ ಲೋಕಾ ಪೊಲೀಸರು ವರದಿ ಸಲ್ಲಿಸುತ್ತಾರೆ. ಈ ವರದಿ ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿಗಳು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುತ್ತಾರೆ. ದಾಳಿ ಪ್ರಕರಣಗಳಾದರೆ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಸರ್ಕಾರದಿಂದ ಪೂರ್ವಾನುಮತಿ ಪಡೆಯುತ್ತಾರೆ. ಆದರೆ, ಇನ್ನು ಮುಂದೆ ದೂರುಗಳು ಬಂದರೂ ತನಿಖೆ ಭ್ರಷ್ಟಾಚಾರ ನಿಗ್ರಹ ದಳದಿಂದಲೇ ಆಗಬೇಕಾಗುತ್ತದೆ. ಇದರಿಂದ ವಸ್ತುನಿಷ್ಠ ತನಿಖೆ ಅಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.
ಭ್ರಷ್ಟಾಚಾರ ಆರೋಪ ಎದುರಿಸುವ ಸಿಬ್ಬಂದಿ ಅಥವಾ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಬೇಕಾದರೂ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂಬ ನಿರ್ಧಾರದಿಂದ ಭ್ರಷ್ಟಾಚಾರದ ವಿರುದ್ಧದ ತನಿಖೆಗೆ ಅಡ್ಡಿಯಾಗುವ ಆತಂಕವಿದೆ. ಇಲಾಖೆಗಳ ಆಡಳಿತ ಮುಖ್ಯಸ್ಥರು ಐಎಎಸ್ ಅಧಿಕಾರಿಗಳಾಗಿದ್ದರೂ ಸಾಮಾನ್ಯವಾಗಿ ಸಚಿವರ ಮಾತುಗಳನ್ನು ಅವರು ತಳ್ಳಿಹಾಕುವುದಿಲ್ಲ. ಆ ಮೂಲಕ ಪರೋಕ್ಷವಾಗಿ ಅಲ್ಲಿ ರಾಜಕೀಯ ಪ್ರವೇಶಿಸುತ್ತದೆ. ಹೀಗಾಗಿ ರಾಜಕೀಯ ಪ್ರಭಾವ ಹೊಂದಿರುವ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡದಂತೆ ರಾಜಕಾರಣಿಗಳು ಸಂಬಂಧಿಸಿದ ಸಚಿವರ ಮೂಲಕ ಒತ್ತಡ ಹೇರುವ ಸಾಧ್ಯತೆ ಇದ್ದು, ಇದು ಪ್ರಕರಣದ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.
Advertisement