ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ "ಲೋಕಾ"ದ 700ಕ್ಕೂ ಹೆಚ್ಚು ಪ್ರಕರಣ ವರ್ಗ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿಕೊಳ್ಳುತ್ತಿರುವ ಬೆನ್ನಲ್ಲೇ ಲೋಕಾಯುಕ್ತ ಸಂಸ್ಥೆಯ ಸುಮಾರು 700 ಕ್ಕೂ ಅಧಿಕ ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ ವರ್ಗಾವಣೆ ಮಾಡಲು ಮುಂದಾಗಿದೆ.
ಪ್ರಸ್ತುತ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿರುವ ಸುಮಾರು 700ಕ್ಕೂ ಅಧಿಕ ಪ್ರಕರಣ ತನಿಖಾ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ಪಡೆಗೆ ರವಾನಿಸಲಿದೆ ಎಂದು ತಿಳಿದುಬಂದಿದೆ. ಈ 700ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪ್ರಮುಖವಾಗಿ ಹೈ ಪ್ರೊಫೈಲ್ ಭ್ರಷ್ಟಾಚಾರ ಪ್ರಕರಣಗಳೇ ಹೆಚ್ಚಾಗಿದ್ದು, ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕೂಡ ಇದರಲ್ಲಿಯೇ ಸೇರಿದೆ ಎಂದು ಹೇಳಲಾಗುತ್ತಿದೆ.
ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಎಡಿಜಿಪಿ ಶ್ರೇಣಿಯ ಅಧಿಕಾರಿಯೊಬ್ಬರು ಎಸಿಬಿ ಮುಖ್ಯಸ್ಥರಾಗಲಿದ್ದು, ಇವರ ಅಧೀನದದಲ್ಲಿ ರಾಜಕಾರಣಿಗಳ ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆಗೊಳಪಡಿಸಲಾಗುತ್ತದೆ. ಮೂಲಗಳ ಪ್ರಕಾರ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಈಗಾಗಲೇ ಕರ್ನಾಟಕ ಲೋಕಾಯುಕ್ತ ಸಂಸ್ಥೆ ದಾಖಲಿಸಿಕೊಂಡಿರುವ 700ಕ್ಕೂ ಹೆಚ್ಚು ಪ್ರಕರಣಗಳನ್ನು ಎಸಿಬಿ ತನಿಖೆ ನಡೆಸಲಿದೆ. ಪ್ರಮುಖವಾಗಿ ಇನ್ನೂ ಪ್ರಾಥಮಿಕ ತನಿಖಾ ಹಂತದಲ್ಲಿರುವ ಮತ್ತು ಇನ್ನಷ್ಟೇ ಪ್ರಕರಣ ದಾಖಲಾಗಬೇಕಿರುವ ಸಿಎಂ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದಿರುವ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಮತ್ತು ಇತ್ತೀಚೆಗಷ್ಟೇ ದಾಖಲಾಗಿರುವ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ವಿರುದ್ಧದ ಪ್ರಕರಣ ಕೂಡ ಎಸಿಬಿ ವ್ಯಾಪ್ತಿಗೆ ಬರುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಲೋಕಾಯುಕ್ತ ಸಂಸ್ಥೆಯ ಬಳಿ ಸುಮಾರು 12 ಸಾವಿರಕ್ಕೂ ಅಧಿಕ ತನಿಖೆಗೊಳಪಡದ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ರಾಜ್ಯ ಸರ್ಕಾರ 700 ಪ್ರಕರಣಗಳನ್ನು ಎಸಿಬಿ ವ್ಯಾಪ್ತಿಗೆ ರವಾನೆ ಮಾಡಿದೆ. ಇದಲ್ಲದೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾಗಿರುವ ಇತರೆ 800 ಪ್ರಕರಣಗಳ ತನಿಖೆಯನ್ನು ಕೂಡ ಎಸಿಬಿ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತಿಸಿದೆ.
ಇನ್ನು ರಾಜ್ಯ ಸರ್ಕಾರದ ಈ ವಿವಾದಿತ ನಡೆಯನ್ನು ಟೀಕಿಸಿರುವ ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಪಾಲ್ಗೊಂಡು ಲೋಕಾಯುಕ್ತದಿಂದ ತನಿಖೆ ಭೀತಿ ಎದುರಿಸುತ್ತಿರುವ ಗಣ್ಯರು, ರಾಜಕಾರಣಿಗಳನ್ನು ರಕ್ಷಿಸಲು ಮತ್ತು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಸರ್ಕಾರ ವ್ಯವಸ್ಥಿತ ಪಿತೂರಿ ನಡೆಸಿದೆ. ವಿವಿಧ ಸಾರ್ವಜನಿಕ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದುಕೊಂಡೇ ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಪರೋಕ್ಷವಾಗಿ ರಕ್ಷಿಸುವ ಮೂಲಕ ರಾಜ್ಯ ಸರ್ಕಾರ ಅವರ ಮೇಲೆ ಕರುಣೆ ತೋರಿಸುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಎಸಿಬಿ ರಚನೆಗೆ ಸ್ವತಃ ಲೋಕಾಯುಕ್ತ ಸಂಸ್ಥೆಯೇ ವಿರೋಧ ವ್ಯಕ್ತಪಡಿಸಿದ್ದರೂ, ರಾಜ್ಯ ಸರ್ಕಾರ ಮಾತ್ರ ಅತ್ತ ಯಾವುದೇ ಗಮನಹರಿಸುತ್ತಿಲ್ಲ. ಬದಲಿಗೆ ಶತಾಯಗತಾಯ ಎಸಿಬಿ ರಚನೆಗೆ ಮುಂದಾಗಿರುವ ಸರ್ಕಾರ ಆದೇಶ ನೀಡಿ ಗೆಜೆಟ್ ಅನುಮೋದನೆ ಪಡೆಯಲು ಮುಂದಾಗಿದೆ. ಮತ್ತೊಂದು ಮೂಲಗಳ ಪ್ರಕಾರ ಎಸಿಬಿ ರಚನೆ ಬಳಿಕ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಸಿಬ್ಬಂದಿಗಳನ್ನು ಖಡಿತಗೊಳಿಸುವ ಪ್ರಸ್ತಾಪವನ್ನು ಕೂಡ ರಾಜ್ಯ ಸರ್ಕಾರ ಮುಂದಿಟ್ಟಿದ್ದು, ಆ ಮೂಲಕ ರಾಜ್ಯ ಮಾನವ ಹಕ್ಕ ಆಯೋಗದಂತೆ ಲೋಕಾಯುಕ್ತ ಸಂಸ್ಥೆಯನ್ನು ಕೂಡ ಒಂದು ಪ್ರಬಲವಲ್ಲದ ಒಂದು ಸಾಮಾನ್ಯ ಸಂಸ್ಥೆಯನ್ನಾಗಿಸುವ ಹುನ್ನಾರ ನಡೆದಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ