ಏಪ್ರಿಲ್ 8 ರಿಂದ ರಾಜ್ಯಾದ್ಯಂತ ಲಾರಿ ಮುಷ್ಕರ

ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡುವುದು ಹಾಗೂ ರಾಜ್ಯ ಹೆದ್ದಾರಿಗಳಿಗೆ ಟೋಲ್ ವಿಧಿಸಿರುವುದನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಲಾರಿ ಮಾಲೀಕರ ಸಂಘ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡುವುದು ಹಾಗೂ ರಾಜ್ಯ ಹೆದ್ದಾರಿಗಳಿಗೆ ಟೋಲ್ ವಿಧಿಸಿರುವುದನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಲಾರಿ ಮಾಲೀಕರ ಸಂಘ ಏ.8ರ ಮಧ್ಯರಾತ್ರಿಯಿಂದ ರಾಜ್ಯಾದ್ಯಂತ ಅನಿರ್ದಿಷ್ಟ ಕಾಲ ಸರಕು ಸಾಗಣೆ ವಾಹನಗಳ ಮುಷ್ಕರಕ್ಕೆ ಕರೆ ನೀಡಿದೆ.

ಪ್ರತಿನಿತ್ಯ ಬೆಂಗಳೂರಿಗೆ ಮರಳಿನ ಅವಶ್ಯಕತೆ ಇದೆ. ಆದರೆ, ರಾಜ್ಯದ ಯಾವ ಜಿಲ್ಲೆಗಳಿಂದಲೂ ಬೆಂಗಳೂರಿಗೆ ಮರಳು ಸಾಗಣೆ ಮಾಡಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ಹೊರರಾಜ್ಯಗಳಿಂದ ನಗರಕ್ಕೆ ಮರಳು ತರಲಾಗುತ್ತಿದೆ. ಇದನ್ನೇ ನೆಪವಾಗಿಸಿಕೊಂಡು ಪೊಲೀಸರು ಪರ್ವಿುಟ್ ಇಲ್ಲವೆಂದು ಲಾರಿಗಳನ್ನು ವಶಕ್ಕೆ ಪಡೆದು, ವಾರಗಟ್ಟಲೆ ಬಿಡದೇ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಮಹಾ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ 10 ಸಾವಿರ ಮರಳು ಪರ್ವಿುಟ್​ಗಳ ಬೇಡಿಕೆ ಇದೆ. ಆದರೆ, ಪರ್ವಿುಟ್ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇದರಿಂದ ಲಾರಿ ಮಾಲೀಕರು ದಂಡ ಕಟ್ಟುವುದಲ್ಲದೆ ಅಧಿಕಾರಿಗಳ ಕಿರುಕುಳ ಎದುರಿಸಬೇಕಾಗಿದೆ. ಮರಳು ಸಾಗಣೆಯಿಂದ ಆಗುತ್ತಿರುವ ನಷ್ಟದಿಂದಾಗಿ ಲಾರಿ ಮಾಲೀಕರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.

ಇತರೆ ರಾಜ್ಯಗಳಲ್ಲಿ ಡೀಸೆಲ್ ಮೇಲಿನ ತೆರಿಗೆ ಕಡಿಮೆ ಇದೆ. ನಮ್ಮಲ್ಲಿ ಮಾತ್ರ ಡೀಸೆಲ್ ಮೇಲೆ ಶೇ.19 ತೆರಿಗೆ ವಿಧಿಸಿ ವಾಹನಗಳ ಮಾಲೀಕರಿಗೆ ಬರೆ ಹಾಕಲಾಗಿದೆ. ಇದರಿಂದ ಸರಕು ಸಾಗಣೆ ವಾಹನಗಳು ಹೊರರಾಜ್ಯಗಳಿಂದಲೇ ಡೀಸೆಲ್ ಹಾಕಿಸಿಕೊಂಡು ಬರುತ್ತಿರುವುದರಿಂದ ರಾಜ್ಯದ ಬೊಕ್ಕಸಕ್ಕೆ 80 ಲಕ್ಷ ರೂ. ನಷ್ಟ ಉಂಟಾಗುತ್ತಿದೆ. ಹೀಗಾಗಿ ಡೀಸೆಲ್ ಮೇಲಿನ ತೆರಿಗೆ ಇಳಿಸುವುದರಿಂದ ಡೀಸೆಲ್ ವಾಹನಗಳಿಗೆ ಮಾತ್ರವಲ್ಲದೇ ಸರ್ಕಾರಕ್ಕೂ ಆದಾಯ ಬರಲಿದೆ ಎಂದಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವೇ ದುಬಾರಿ ಎನ್ನುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯ ಹೆದ್ದಾರಿಗಳಿಗೂ ಟೋಲ್ ವಿಧಿಸಲು ಮುಂದಾಗಿದೆ. ಇಲ್ಲಿಯೂ ಟೋಲ್ ಕಟ್ಟಬೇಕೆಂದರೆ ಮಾಲೀಕರಿಗೆ ಹೊರೆಯಾಗಲಿದೆ. ಈ ತೀರ್ಮಾನ ಹಿಂಪಡೆಯಬೇಕು ಎಂದು ಒತ್ತಾಯಿಸಿ ಮುಶ್ಕರ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com