ಮಂಡ್ಯ: ಮಹಿಳೆಯ ಸಾವಿನಿಂದ ರೊಚ್ಚಿಗೆದ್ದ ಸಂಬಂಧಿಕರು ಆಕೆಯ ಪತಿ ಮನೆಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರಿಂದ ಕೆ.ಆರ್.ಪೇಟೆಯ ನಾಡಭೋಗನಹಳ್ಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಕೆ.ಆರ್ ಪೇಟೆ ತಾಲಬಕಿನ ನಾಡಬೋಗನಹಳ್ಳಿನಹಳ್ಳಿ ಗ್ರಾಮದ ಮಣಿಯಮ್ಮ ಹಾಗೂ ತಮ್ಮಯಪ್ಪ ಅವರ ಪುತ್ರಿ ಪ್ರಿಯಾಂಕ ಅನುಮಾನಾಸ್ಪದವಾಗಿ ಮೃತಪಟ್ಟವರು. ಇವರಿಗೆ 2 ವರ್ಷದ ಗಂಡು ಮಗುವಿದೆ. ಇವರ ಪತಿ ಮಂಜಪ್ಪ ಉಸಿರುಗಟ್ಟಿಸಿ ಕೊಲೆ ಮಾಡಿದ ನಂತರ ತಂದೆ ಮಂಜುನಾಥ, ಚಿಕ್ಕಪ್ಪ ಪುಟ್ಟರಾಜು, ಹಾಗೂ ಸಂಬಂಧಿಕರ ಸಹಾಯದಿಂದ ಕೈ, ಕಾಲು ಕಟ್ಟಿ ನೇಣು ಹಾಕಿದ್ದಾರೆ ಎಂದು ಮೃತಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಣಿಯಮ್ಮಗೂ ಆಸ್ತಿಯಿದ್ದು 8 ತಿಂಗಳ ಹಿಂದಷ್ಟೇ ಅವರ ಪತಿ ತಮ್ಮಯಪ್ಪ ಮೃತಪಟ್ಟಿದ್ದರು. ನಾಲ್ವರು ಹೆಣ್ಣುಮಕ್ಕಳೇ ಆಗಿದ್ದರಿಂದ ಇವರ ಆಸ್ತಿಯಲ್ಲಿ ಪಾಲು ಸಿಗುತ್ತದೆ ಎಂಬ ದುರಾಸೆಯಲ್ಲಿ ಮಂಜಪ್ಪನಿದ್ದ. ಈ ವಿಚಾರದಲ್ಲಿ ತೀರ್ಥಮಣಿಯಮ್ಮ ಜತೆ ಒಮ್ಮೆ ಗಲಾಟೆಯನ್ನೂ ಮಾಡಿದ್ದ. ಕಳೆದ ಎರಡು ವಾರಗಳ ಹಿಂದೆ ದಂಪತಿ ನಡುವೆ ಜಗಳವಾಗಿದ್ದು, ಪ್ರಿಯಾಂಕ ತನ್ನ ಪೋಷಕರ ಬಳಿ ವಿಷಯ ತಿಳಿಸಿದ್ದಳು. ಈ ವೇಳೆ ಮಂಜಪ್ಪನ ಜೊತೆ ಮಾತುಕತೆ ನಡೆಸಿ ಪೋಷಕರು ಸಂಧಾನ ನಡೆಸಿದ್ದರು.
ರೋಪಿಗಳನ್ನು ಮನೆಯಿಂದ ಹೊರಗೆ ಕರೆತಂದು ಆಸ್ಪತ್ರೆಗೆ ಕಳುಹಿಸಲು ಪೊಲೀಸರು ಗಂಟೆಗಟ್ಟಲೆ ಕಾಯ ಬೇಕಾಯಿತು. ಹೊರಗೆ ಬಂದಾಗ ಅವರ ಮೇಲೆ ಹಲ್ಲೆ ನಡೆಸಲು ಕಾದಿದ್ದರು. ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡ ಬಳಿಕ ಹೊರಗೆ ಕರೆತಂದಾಗ ಜನ ರೊಚ್ಚಿಗೆದ್ದು ಕಲ್ಲು ತೂರಾಟ ಆರಂಭಿಸಿದರು. ಈ ನಡುವೆ ಮಂಜಪ್ಪನ ಪೋಷಕರು, ಇಬ್ಬರು ಪತ್ರಕರ್ತರು ಹಾಗೂ ಮೂವರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಪ್ರಿಯಾಂಕ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ವಾಹನಗಳಲ್ಲಿ ಧಾವಿಸಿದ ಸಂಬಂಧಿಕರು, ಸ್ಥಳೀಯರ ಜತೆಗೂಡಿ ಮನೆಗೆ ನುಗ್ಗಿ ಪತಿ ಮಂಜಪ್ಪ, ಚಿಕ್ಕಪ್ಪ ಪುಟ್ಟರಾಜು, ಚಿಕ್ಕಮ್ಮ ಮಂಜುಳಾಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮನೆ ಬಳಿ ಇದ್ದ ಎತ್ತಿನಗಾಡಿ, ಬೈಕ್, ತೆಂಗಿನ ಸಿಪ್ಪೆಗಳ ರಾಶಿಗೆ ಬೆಂಕಿ ಹಚ್ಚಿದ್ದಾರೆ. ಜತೆಗೆ ಮನೆಯ ಮೇಲೆ ಕಲ್ಲು ತೂರಾಟ ಮಾಡಿ, ಕೈಗೆ ಸಿಕ್ಕ ವಸ್ತುಗಳನ್ನು ನಾಶ ಮಾಡಿದ್ದಾರೆ. ಪಾಲಕರನ್ನು ಸಮಾಧಾನಪಡಿಸಿದ ಪೊಲೀಸರು ಪ್ರಿಯಾಂಕಾ ಶವವನ್ನು ಕೆ.ಆರ್. ಆಸ್ಪತ್ರೆಗೆ ಸಾಗಿಸಿದರು.