

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ನಾಳೆ(ಮೇ 4) ಮತ್ತು ನಾಡಿದ್ದು ರಾಜ್ಯಾದ್ಯಂತ ನಡೆಯಲಿದೆ.
ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪರೀಕ್ಷೆಯಲ್ಲಿ ನಡೆದ ಅಕ್ರಮಗಳಿಂದಾಗಿ ಎರಡು ಬಾರಿ ಮರು ಪರೀಕ್ಷೆ ನಡೆಸಬೇಕಾಯಿತು. ಇಂತಹದ್ದೇ ಪರೀಕ್ಷಾ ಅಕ್ರಮಗಳು ಸಿಇಟಿಯಲ್ಲೂ ಮರುಕಳಿಸಬಾರದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಸಲ ಭಾರೀ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.
ಏನೇನು ಕ್ರಮ: ಇತ್ತೀಚೆಗೆ ಮಾರುಕಟ್ಟೆಗೆ ಬರುವ ಕೆಲವು ವಾಚುಗಳಲ್ಲಿ ಕ್ಯಾಮೆರಾಗಳೂ ಇರುತ್ತವೆ. ಆದುದರಿಂದ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳಲು ಕೈಗಡಿಯಾರ ನಿಷೇಧಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಡಳಿತಾಧಿಕಾರಿ ಎಸ್.ಎನ್. ಗಂಗಾಧರಯ್ಯ ತಿಳಿಸಿದ್ದಾರೆ.
ಒಟ್ಟು 391 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಈ ಸಲ 1.78 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ನಿಯಮಗಳು: ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ಯಾವುದಾದರೊಂದು ಗುರುತಿನ ಚೀಟಿ (ಕಾಲೇಜು ಗುರುತು ಪತ್ರ, ಬಸ್ ಪಾಸ್, ಡಿಎಲ್, ಪಾಸ್‌ಪೋರ್ಟ್, ಆಧಾರ್ ಇತ್ಯಾದಿ) ತೋರಿಸಬೇಕು.
* ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕ್ಯುಲೇಟರ್, ವೈರ್‌ಲೆಸ್ ಸೆಟ್, ಪುಸ್ತಕ ಇತ್ಯಾದಿ ನಿಷೇಧ.
* ಈ ವರೆಗೆ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡದ ವಿದ್ಯಾರ್ಥಿಗಳು ಈಗಲೂ ವೆಬ್‌ಸೈಟ್‌ನಿಂದ ( http://kea.kar.nic.in) ಡೌನ್‌ಲೋಡ್ ಮಾಡಿಕೊಳ್ಳಬಹುದು.
* ಪರೀಕ್ಷೆ ಆರಂಭವಾಗುವ 30 ನಿಮಿಷಗಳ ಮೊದಲೇ ಕೇಂದ್ರದಲ್ಲಿ ಹಾಜರಿರಬೇಕು.