ಈಗಲೇ ಟ್ಯಾಂಕ್ ಭರ್ತಿ ಮಾಡಿಸಿ, ವಾರಾಂತ್ಯದಲ್ಲಿ ಪೆಟ್ರೋಲ್-ಡೀಸೆಲ್ ಪೂರೈಕೆ ಸ್ಥಗಿತ ಸಾಧ್ಯತೆ

ವಿವಿಧ ಬೇಡಿಕೆಗಳನ್ನು ಈಡೇರುವಂತೆ ತಿಂಗಳ ಹಿಂದಷ್ಟೇ ಮುಷ್ಕರ ಕೂತಿದ್ದ ಟ್ಯಾಂಕರ್ ಮಾಲೀಕರು ಇದೀಗ ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಮತ್ತೆ ಮುಷ್ಕರ ಹೂಡಲು ನಿರ್ಧರಿಸಿದ್ದು,...
ಪೆಟ್ರೋಲ್-ಡೀಸೆಲ್ ಟ್ಯಾಂಕರ್ ಮಾಲೀಕರ ಮುಷ್ಕರ (ಸಂಗ್ರಹ ಚಿತ್ರ)
ಪೆಟ್ರೋಲ್-ಡೀಸೆಲ್ ಟ್ಯಾಂಕರ್ ಮಾಲೀಕರ ಮುಷ್ಕರ (ಸಂಗ್ರಹ ಚಿತ್ರ)

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರುವಂತೆ ತಿಂಗಳ ಹಿಂದಷ್ಟೇ ಮುಷ್ಕರ ಕೂತಿದ್ದ ಟ್ಯಾಂಕರ್ ಮಾಲೀಕರು ಇದೀಗ ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಮತ್ತೆ ಮುಷ್ಕರ ಹೂಡಲು  ನಿರ್ಧರಿಸಿದ್ದು, ವಾರಾಂತ್ಯದಲ್ಲಿ ಪೆಟ್ರೋಲ್-ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿದುಬಂದಿದೆ.

ದೇವನಗುಂದಿಯಿಂದ ಇಂಧನ ಸಾಗಣಿಕೆಗೆ ಎದುರಾಗುತ್ತಿರುವ ಸಮಸ್ಯೆಯನ್ನು ಮೂರು ಪ್ರಮುಖ ಇಂಧನ ಸಂಸ್ಥೆಗಳು ಪರಿಹರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್  ಮತ್ತಿತರ ಇಂಧನ ಪೂರೈಸುವ ಲಾರಿ ಮಾಲೀಕರು ಶುಕ್ರವಾರ ಮತ್ತೆ ಮುಷ್ಕರ ಆರಂಭಿಸುವ ಸಾಧ್ಯತೆ ಇದೆ. ಹೊಸಕೋಟೆಯಿಂದ 12 ಕಿ.ಮೀ ದೂರದಲ್ಲಿರುವ ಎಚ್‌ಪಿಸಿಎಲ್, ಐಒಸಿ,  ಬಿಪಿಸಿಎಲ್ ಕಂಪನಿಗಳಿಂದ ಬೆಂಗಳೂರು ವಿಭಾಗಕ್ಕೆ ಪೆಟ್ರೋಲ್, ಡೀಸೆಲ್  ಪೂರೈಕೆಯಾಗುತ್ತಿದೆ.

ಆದರೆ ಇದು ಗ್ರಾಮೀಣ ಭಾಗವಾದ್ದರಿಂದ ಕಿರಿದಾದ ರಸ್ತೆಗಳು ಹಾಗೂ ಕಳಪೆಯಾಗಿರುವ ಕಾರಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಲಾರಿ ಮಾಲೀಕರು, ಚಾಲಕರ ಸಂಘಗಳು  ಕಳೆದ ತಿಂಗಳು ದಿಢೀರ್ ಮುಷ್ಕರ ನಡೆಸಿದ್ದವು. ಇದರಿಂದ ಸಂಧಾನಕ್ಕೆ ಮುಂದಾಗಿದ್ದ ಇಂಧನ ಸಂಸ್ಥೆಗಳು ತಿಂಗಳೊಳಗೆ ಸಮಸ್ಯೆ ಬಗೆಹರಿಸುವ ಕುರಿತು ಭರವಸೆ ನೀಡಿದ್ದವು. ಹೀಗಾಗಿ ಅಂದು  ಮುಷ್ಕರವನ್ನು ವಾಪಸ್ ಪಡೆಯಲಾಗಿತ್ತು. ಆದರೆ ತಿಂಗಳಾದರೂ ಸಮಸ್ಯೆ ಬಗೆಹರಿಯದ ಹಿನ್ನಲೆಯಲ್ಲಿ ಮತ್ತೆ ಮುಷ್ಕರ ಹೂಡಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ.

ಈ ಹಿನ್ನಲೆಯಲ್ಲಿ ವಾರಾಂತ್ಯದಲ್ಲಿ ಬೆಂಗಳೂರಿಗೆ ಆಗುತ್ತಿರುವ ಪೆಟ್ರೋಲ್-ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ಪೂರೈಕೆದಾರರ ಮುಷ್ಕರ  ಆರಂಭವಾದರೆ ಸೋಮವಾರದವರೆಗೂ ಪೆಟ್ರೋಲ್, ಡೀಸೆಲ್ ದೊರೆಯುವುದು ಅನುಮಾನ. ವಾರಾಂತ್ಯದ ಬಳಿಕ ಅಕ್ಷಯ ತೃತೀಯ ಸಹ ಇರುವುದರಿಂದ ಸಾಲು-ಸಾಲು ರಜೆಗಳಲ್ಲಿ  ಪೆಟ್ರೋಲ್ ಸಿಗದೆ ಜನ ಹೈರಾಣಾಗಬೇಕಾದ ಸ್ಥಿತಿ ಬಂದರೂ ಆಶ್ಚರ್ಯಪಡಬೇಕಿಲ್ಲ.

ಬೇಡಿಕೆ ಏನು?:
ದೇವನಗುಂದಿಯಿಂದಲೇ ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಪೆಟ್ರೋಲ್-ಡೀಸೆಲ್ ಪೂರೈಕೆಯಾಗುತ್ತಿದ್ದು, ಹೊಸಕೋಟೆಯಿಂದ  ದೇವನಗುಂದಿಗೆ ಸಾಗುವ ರಸ್ತೆಗಳು ಅಷ್ಟು ಚೆನ್ನಾಗಿಲ್ಲ. ಹೊಸ ರಸ್ತೆ ನಿರ್ಮಿಸಿದರೂ ಅವು ತಿಂಗಳೊಳಗಾಗಿ ಕಿತ್ತು ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದ ರಸ್ತೆಗಳನ್ನು  ನಿರ್ಮಿಸಬೇಕು ಎಂದು ಲಾರಿ ಮಾಲೀಕರು ಆಗ್ರಹಿಸಿದ್ದರು. ಅಂತೆಯೇ ಇದಕ್ಕೆ ರಾಜ್ಯ ಸರ್ಕಾರ ಅನುದಾನ ನೀಡದಿದ್ದರೆ ಕಂಪನಿಗಳೇ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಲಾರಿಗಳ ನಿರ್ವಹಣೆ ಕಷ್ಟ  ಎಂದು ಚಾಲಕರು, ಮಾಲೀಕರ ಸಂಘ ಒತ್ತಾಯಿಸಿತ್ತಿದೆ. ಇದಲ್ಲದೆ ಕಂಪನಿಗಳಿಂದ ಇಂಧನ ಪೂರೈಸುವ ಚಾಲಕರಿಗೆ ಕ್ಯಾಂಟಿನ್ ವ್ಯವಸ್ಥೆ, ಶೌಚಗೃಹದ ವ್ಯವಸ್ಥೆ ಸೇರಿ ಹಲವು ಸೌಲಭ್ಯ  ಒದಗಿಸುವಂತೆ ಒತ್ತಾಯಿಸಿ ಕಳೆದ ಏಪ್ರಿಲ್ 5 ರಂದು ಚಾಲಕರು ಮುಷ್ಕರ ನಡೆಸಿದ್ದರು. ಇದರಿಂದ ಬೆಂಗಳೂರು ಸೇರಿ ಅನೇಕ ಕಡೆ ಪೆಟ್ರೋಲ್, ಡೀಸೆಲ್‌ಗಳ ಪೂರೈಕೆ ಇಲ್ಲದೆ ಸವಾರರು  ತೊಂದರೆ ಅನುಭವಿಸಿದ್ದರು.

ಕರೆ ನೀಡದೆ ದಿಢೀರ್ ಮುಷ್ಕರ
ಇನ್ನು ಕಳೆದ ಬಾರಿ ಮಾಹಿತಿ ನೀಡಿ ಮುಷ್ಕರ ಹೂಡಿದ್ದ ಲಾರಿ ಮಾಲೀಕರು ಈ ಬಾರಿ ಯಾವುದೇ ಕರೆ ಅಥವಾ ಮಾಹಿತಿ ನೀಡದೇ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.  ಕಳೆದ ಬಾರಿ ಕಂಪನಿಯೊಂದಿಗೆ ಮಾತುಕತೆ ನಡೆಸಿದ್ದ ಪೂರೈಕೆದಾರರು ಸ್ಪಂದಿಸದಿದ್ದಾಗ ಮುಷ್ಕರ ಆರಂಭಿಸಿದ್ದರು. ಇದು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿರುವುದನ್ನು ಅರಿತ ಮೂರು  ಕಂಪನಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದವು. ಆದರೂ, ಈವರೆಗೆ ಯಾವುದೇ ಭರವಸೆ ಈಡೇರದ ಕಾರಣ ಶುಕ್ರವಾರದಿಂದ ಮತ್ತೆ ಮುಷ್ಕರ ಆರಂಭಗೊಳ್ಳುವ ಸಾಧ್ಯತೆಯಿದೆ.  ಮುಷ್ಕರ ಆರಂಭವಾದರೆ ಬೆಂಗಳೂರು ವಿಭಾಗದ ಐದಾರು ಜಿಲ್ಲೆಗಳಲ್ಲಿ  ತೀವ್ರ ಸಮಸ್ಯೆ ಉಂಟಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com