

ಹುಬ್ಬಳ್ಳಿ: ಮನೆ ಮುಂದೆ ಆಟವಾಡುತ್ತಿದ್ದ 18 ತಿಂಗಳ ಗಂಡು ಮಗುವೊಂದು ಹಾಡಹಗಲೇ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಹಳೇ ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದ್ದು ಮಂಗಳವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪಹೃತ ಬಾಲಕನನ್ನು ನೂರಾನಿ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದ ನಜೀರ್ ಸಾಬ್ - ಸಲ್ಮಾ ಬಾನು ಅವರ ಒಂದುವರೆ ವರ್ಷದ ಮಗ ಆಫ್ತಾಬ್ ನಜೀರ್ ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಲ್ಮಾ ಮನೆ ಮುಂದೆ ಮಗನಿಗೆ ಊಟ ಮಾಡಿಸುತ್ತಿದ್ದಳು. ಕುಡಿಯಲು ನೀರು ತರಲು ಮಗನನ್ನು ಮನೆ ಮುಂದೆ ಬಿಟ್ಟು ಒಳಗೆ ಹೋಗಿ ಬರುವಷ್ಟರಲ್ಲಿ ಆತ ನಾಪತ್ತೆಯಾಗಿದ್ದಾನೆ. ಮಗನಿಗಾಗಿ ಬೀದಿಯಲ್ಲೆಲ್ಲ ಹುಡುಕಾಡಿದ ದಂಪತಿ ಈಗ ಮಗನ ಅಪಹರಣವಾಗಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮೊದಲಿಗೆ ಪೊಲೀಸರು ಬಾಲಕ ನಾಪತ್ತೆಯಾಗಿದ್ದಾನೆಂದು ಭಾವಿಸಿ ಹುಡುಕಾಡಿದ್ದರು. ಆದರೆ ಮಗು ಸಿಗದಿರುವ ಹಿನ್ನೆಲೆಯಲ್ಲಿ, ಕಳ್ಳತನವಾಗಿರಬಹುದೆಂದು ಶಂಕಿಸಿದ್ದಾರೆ. ಇನ್ನೂ ಯಾರಾದರೂ ಕಿಡ್ನಾಪ್ ಮಾಡಿರುವ ಸಾಧ್ಯತೆ ಕಡಿಮೆ, ಯಾಕೆಂದರೇ ಬಾಲಕನ ಪೋಷಕರು ಬಡತನ ಹಿನ್ನೆಲೆ ಹೊಂದಿರುವವರು ಎಂದು ಪೊಲೀಸರು ಹೇಳಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.