"ಇದು ನನ್ನ ಬಸ್" ಅಭಿಯಾನಕ್ಕೆ ಚಾಲನೆ

ಸಾರ್ವಜನಿಕ ಆಸ್ತಿಗಳಾದ ಸರ್ಕಾರಿ ಬಸ್ಸುಗಳ ರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಆರಂಭಿಸಿರುವ ‘ಇದು ನನ್ನ ಬಸ್‌’ ಎಂಬ ಅಭಿಯಾನಕ್ಕೆ ಮಂಗಳಾವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು...
ಇದು ನನ್ನ ಬಸ್ ಅಭಿಯಾನ (ಟಿಎನ್ ಐಇ ಚಿತ್ರ)
ಇದು ನನ್ನ ಬಸ್ ಅಭಿಯಾನ (ಟಿಎನ್ ಐಇ ಚಿತ್ರ)
Updated on: 

ಬೆಂಗಳೂರು: ಸಾರ್ವಜನಿಕ ಆಸ್ತಿಗಳಾದ ಸರ್ಕಾರಿ ಬಸ್ಸುಗಳ ರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಆರಂಭಿಸಿರುವ ‘ಇದು ನನ್ನ ಬಸ್‌’ ಎಂಬ  ಅಭಿಯಾನಕ್ಕೆ ಮಂಗಳಾವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಜೆಂದ್ರ ಕುಮಾರ್ ಕಟಾರಿಯಾ ಅವರ ನೇತೃತ್ವದಲ್ಲಿ ಈ ನೂತನ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಅಭಿಯಾನದ ವೇಳೆ ಬಸ್ ಗಳ ಅಂತ್ಯ  ಸಂಸ್ಕಾರದ ಮೆರವಣಿಗೆ ನಡೆಸಲಾಯಿತು. ಇತ್ತೀಚೆಗೆ ಕೇಂದ್ರ ಸರ್ಕಾರದ ನೂತನ ನೂತನ ಪಿಎಫ್‌ ನೀತಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಉದ್ರಿಕ್ತರು ಹಚ್ಚಿದ ಬೆಂಕಿಯಿಂದ ಸುಟ್ಟು  ಕರಕಲಾದ 7 ಬಸ್‌ಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ನೋವಿನಿಂದ ಕಣ್ಣೀರಿಡುತ್ತಿರುವಂತೆ ಚಿತ್ರಗಳಿಂದ ಮೈದಳೆದು, ತಮ್ಮ ದುರಂತ ಕಥೆಯನ್ನು ತಾವೇ ಸಾರುವ  ಮಾದರಿಯಲ್ಲಿ ಬರಹಗಳನ್ನು ಅಂಟಿಸಿಕೊಂಡಿದ್ದ ಬಸ್‌ಗಳನ್ನು ಪೀಣ್ಯ ಬಸ್‌ ಡಿಪೊದಿಂದ ಮೆರವಣಿಗೆ ಮೂಲಕ ಮೆಜೆಸ್ಟಿಕ್‌ನ ಕೆಎಸ್‌ಆರ್‌ಸಿಟಿ ಬಸ್‌ ನಿಲ್ದಾಣಕ್ಕೆ ತರಲಾಗಿತ್ತು. ವಿದೇಶಗಳಲ್ಲಿ  ಪ್ರತಿಭಟನೆ ವೇಳೆ ನಾಗರಿಕರು ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಹೇಗೆ ವರ್ತಿಸುತ್ತಾರೆ ಎಂಬ ಬಗ್ಗೆ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಒಳಗೊಂಡ ಫಲಕಗಳನ್ನು ಬಸ್‌ಗಳ ಮೇಲೆ  ಅಂಟಿಸಲಾಗಿತ್ತು.

ಈ ವೇಳೆ ಮಾತನಾಡಿದ ಸಾರಿಗೆ ಸಚಿವೆ ರಾಮಲಿಂಗಾರೆಡ್ಡಿ ಅವರು, ‘ಬಸ್‌ಗಳು ನಮ್ಮ ಸ್ವಂತ ಆಸ್ತಿ ಇದ್ದಂತೆ. ನಮ್ಮ ಮನೆಗೆ ನಾವು ಕಲ್ಲು ಹೊಡೆಯಲು ಸಾಧ್ಯವೆ? ಪ್ರತಿಭಟನೆ ವೇಳೆ  ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಸರ್ಕಾರದ ಬೊಕ್ಕಸಕ್ಕೆ ನಷ್ಟ. ಅದು ಬೇರೊಂದು ರೂಪದಲ್ಲಿ ನಾಗರಿಕರ ಮೇಲೆಯೇ ಹೊರೆಯಾಗುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಅವರು ಸುಸ್ಥಿತಿಯಲ್ಲಿದ್ದ ಒಂದು ಬಸ್‌ನ್ನು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವಂತೆ ಅಲಂಕರಿಸಿದರು. ಆ ಬಸ್‌ಗೆ ಅಂಟಿಸಿದ್ದ  ‘ಇದು  ನಮ್ಮ ಸ್ವತ್ತು ಇದನ್ನು ನಾವು ಕಾಪಾಡುತ್ತೇವೆ’ ಎಂಬ ಪ್ರತಿಜ್ಞಾ ಫಲಕದ ಮೇಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೇರಿದಂತೆ ವಿವಿಧ ಗಣ್ಯರು ಮತ್ತು ಸಾರ್ವಜನಿಕರು ಸಹಿ ಮಾಡಿದರು.

ಇನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಗಾರ್ಮೆಂಟ್ ನೌಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆಪಿ ರತ್ನಾ ಅವರು ಮಾತನಾಡಿ, ಪ್ರತಿಭಟನೆ ವೇಳೆ ಸರ್ಕಾರಿ ಆಸ್ತಿಪಾಸ್ತಿಗಾದ  ನಷ್ಟಕ್ಕೆ ನಾವು ಕ್ಷಮೆ ಕೋರುತ್ತೇವೆ. ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡುವುದು ನಮೆಲ್ಲರ ಕರ್ತವ್ಯವೆಂದು ತಿಳಿದಿದೆ. ಆದರೆ ಕೆಲವೊಮ್ಮೆ ನಮ್ಮ ಕುಂದುಕೊರತೆಗಳನ್ನು ನೀಗಿಸಿಕೊಳ್ಳಲು  ಪ್ರತಿಭಟನೆ ಹಾದಿ ತುಳಿಯಬೇಕಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ್‌ ಕಟಾರಿಯಾ ಮಾತನಾಡಿ, ‘ಪ್ರತಿಭಟನೆ ಎಂದ ತಕ್ಷಣವೇ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಎಂದಾಗಿದೆ.  ಅದರಲ್ಲೂ ಪ್ರತಿಭಟನೆಗಳಲ್ಲಿ ಬಸ್‌ಗಳೇ ಮೊದಲು ಆಕ್ರೋಶಕ್ಕೆ ತುತ್ತಾಗುತ್ತವೆ. ದೇಶದ ವಿವಿಧೆಡೆ ಇತ್ತೀಚೆಗಷ್ಟೆ ಕೋಟ್ಯಂತರ ಮೌಲ್ಯದ ಬಸ್‌ಗಳನ್ನು ಸುಟ್ಟು ಹಾಕಲಾಗಿದೆ. ಪ್ರತಿಭಟನೆ ವೇಳೆ  ಬಸ್‌ಗೆ ಹಾನಿ ಮಾಡದಂತೆ ಜಾಗೃತಿ ಮೂಡಿಸುವುದಕ್ಕಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಬಸ್‌ನ್ನು ನಿತ್ಯ ಒಂದೊಂದು ಪ್ರದೇಶಕ್ಕೆ ಕಳುಹಿಸಲಾಗುವುದು’ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com