ನಿರ್ಣಾಯಕ ಘಟ್ಟದಲ್ಲಿ ಸರಣಿ ಸ್ಫೋಟ ವಿಚಾರಣೆ; ಉಲ್ಟಾ ಹೊಡೆಯುತ್ತಿರುವ ಸಾಕ್ಷ್ಯಾಧಾರಗಳು

2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ಶೇ.98 ವಿಚಾರಣೆ ಪೂರ್ಣಗೊಂಡಿದೆ.
ಶಂಕಿತ ಉಗ್ರ ಮತ್ತು ಸರಣಿ ಸ್ಫೋಟ ರೂವಾರಿ ಅಬ್ದುಲ್ ನಾಸಿರ್ ಮದನಿ (ಸಂಗ್ರಹ ಚಿತ್ರ)
ಶಂಕಿತ ಉಗ್ರ ಮತ್ತು ಸರಣಿ ಸ್ಫೋಟ ರೂವಾರಿ ಅಬ್ದುಲ್ ನಾಸಿರ್ ಮದನಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ಶೇ.98 ವಿಚಾರಣೆ ಪೂರ್ಣಗೊಂಡಿದೆ.

ಈ ವರೆಗೂ ಪ್ರಕರಣದಲ್ಲಿನ ಕೇರಳ ಮೂಲದ ಶೇ.90ರಷ್ಟು ಸಾಕ್ಷಿಗಳನ್ನು ನ್ಯಾಯಾಲಯ ವಿಚಾರಣೆಗೊಳಪಡಿಸಿದ್ದು, ಎಲ್ಲ ಸಾಕ್ಷಿಗಳ ಹೇಳಿಕೆ ಮೊದಲಿನ ಹೇಳಿಗೆ ತದ್ವಿರುದ್ಧವಾಗಿದೆ. ಸರಣಿ  ಸ್ಫೋಟ ಸಂಬಂಧ ದಾಖಲಾಗಿರುವ ಒಟ್ಟು 9 ಪ್ರಕರಣಗಳಲ್ಲಿ 242 ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗಿದ್ದು, ಬೆಂಗಳೂರು ನ್ಯಾಯಾಲಯ 2013ರಿಂದ ಇಲ್ಲಿಯವರೆಗೂ ಸುಮಾರು 190 ಸಾಕ್ಷಿಗಳ  ಹೇಳಿಕೆ ಪಡೆದಿದೆ. ಆದರೆ ಈ ಸಾಕ್ಷಿಗಳ ಹೇಳಿಕೆಗಲು ಇದೀಗ ಬದಲಾಗಿದ್ದು, ಮೊದಲಿನ ಹೇಳಿಕೆಗೂ ಇಗ ನೀಡುತ್ತಿರುವ ಹೇಳಿಕೆಗಳಿಗೂ ಅಜಗಜಾಂತರ ವತ್ಯಾಸ ಕಂಡುಬರುತ್ತಿದೆ.

ಪ್ರಾಸಿಕ್ಯೂಷನ್ ವಕೀಲರು ಆರೋಪಿಸುವಂತೆ ಆರೋಪಿ ಶಂಕಿತ ಉಗ್ರ ಅಬ್ದುಲ್ ನಾಸಿರ್ ಮದನಿ ತನ್ನ ಬೆಂಬಲಿಗರ ಮೂಲಕ ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರಿದ್ದು, ಸಾಕ್ಷಿಗಳು ಅವರ  ವಿರುದ್ಧ ಸಾಕ್ಷಿ ಹೇಳದಂತೆ ನೋಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. "ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮದನಿ ತನ್ನ ಬಲಗೈ ಬಂಟರಾದ ಸಲಾಬುದ್ದೀನ್, ಟಿ ನಾಸಿರ್ ಮೂಲಕವಾಗಿ  ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಸ್ತುತ ಮದನಿ ವಿರುದ್ಧ ಸಾಕ್ಷ್ಯ ಹೇಳಲು ಮತ್ತು ಪ್ರಕರಣದಲ್ಲಿನ ತನ್ನ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ರಿಜು ಕುರಿಯನ್ ಗೆ ಬೆದರಿಕೆ ಹಾಕಿ ಪ್ರತೀಕೂಲ ಸಾಕ್ಷ್ಯ ಹೇಳಿಸಿದ್ದಾನೆ ಎಂದು  ಪ್ರಾಸಿಕ್ಯೂಷನ್ ಪರ ವಕೀಲರು ಹೇಳಿದ್ದಾರೆ. ನಾಸಿರ್ ಬಲ ಗೈ ಭಂಟರಾದ ಸಲಾಬುದ್ದೀನ್ ಮತ್ತು ನಾಸಿರ್ ರಿಜು ಕುರಿಯನ್ ಗೆ ಬೆದರಿಕೆ ಹಾಕಿದ್ದು, ಈ ಪೈಕಿ ಸಲಾಬುದ್ದೀನ್ ಎಂಬಾತನನ್ನು ಈ  ಹಿಂದೆ ಎನ್ ಐಎ ಅಧಿಕಾರಿಗಳು ಬಂಧಿಸಿದ್ದರು.

ಇಂತಹುದೇ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಾಸಿರ್ ವಿರುದ್ಧ ಕೇರಳದ ಎರ್ನಾಕುಲಂನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ರೂಪೇಶ್ ಮತ್ತು ರಾಮಚಂದ್ರ  ಎಂಬ ಸಾಕ್ಷಿಗಳಿಗೆ ನಾಸಿರ್ ಬೆದರಿಕೆ ಹಾಕಿದ್ದು, ಅವರು ಪೊಲೀಸ್ ರಕ್ಷಣೆ ಕೇಳಿದ್ದಾರೆ ಎಂದು ತನಿಖಾದಳದ ಮೂಲಗಳು ಮಾಹಿತಿ ನೀಡಿವೆ. ಇನ್ನು ಪ್ರಕರಣದಲ್ಲಿ ಇತರೆ ಸಾಕ್ಷಿದಾರರಾದ ಕೇರಳ  ಮತ್ತು ಹೈದರಾಬಾದ್ ಮೂಲದ ಸುಮಾರು 80 ಮಂದಿ ಪ್ರಸ್ತುತ ಬೆಂಗಳೂರಿನಲ್ಲಿಯೇ ಇದ್ದು, ಅವರಿಗೂ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಕ್ಷಿಗಳನ್ನು ಅವರ ತವರಿಗೆ ತೆರಳಲು  ಅನುವು ಮಾಡಿಕೊಟ್ಟರೆ ಮತ್ತೆ ಅವರು ವಿಚಾರಣೆಗೆ ಬರುವುದು ಕಷ್ಟ. ಆಗ ಮತ್ತೆ ಸಮನ್ಸ್ ಜಾರಿ ಮಾಡಿ ಅವರು ಹಾಜರಾಗದಿದ್ದರೆ ಮತ್ತೆ ವಾರಂಟ್ ಜಾರಿ ಮಾಡಬೇಕಾಗುತ್ತದೆ. ಆದರೂ ಅವರು  ವಿಚಾರಣೆಗೆ ಹಾಜರಾಗುವ ಬಗ್ಗೆ ಶಂಕೆ ಇರುವುದರಿಂದ ಅವರ ಆಸ್ತಿ ಕುರಿತ ದಾಖಲೆಗಳನ್ನು ಸಲ್ಲಿಸಬೇಕು ಎಂದು ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಪ್ರಕರಣದ ಸಾಕ್ಷಿಗಳ ಪೈಕಿ ಶೇ.50 ರಷ್ಟು ಮಂದಿ ಕೇರಳಿಗರಾಗಿದ್ದು, ಅವರಿಗೆ ಇಂಗ್ಲಿಷ್ ಬರುವುದಿಲ್ಲ ಹೀಗಾಗಿ ಅವರ ಹೇಳಿಕೆಗಳನ್ನು ಇಂಗ್ಲೀಷ್ ಗೆ ಭಾಷಾಂತರಿಸಬೇಕಿದೆ. ಇದೂ ಕೂಡ  ವಿಚಾರಣೆ ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದ ವಿಶೇಷ ಅಭಿಯೋಜಕರಾಗಿದ್ದ ಕೆಕೆ ಸೀತಾರಂ ಅವರು ಅನಾರೋಗ್ಯ ಕಾರಣದಿಂದ ನಿವೃತ್ತರಾದ ಬಳಿಕ ಸರ್ಕಾರ  ಬರೊಬ್ಬರಿ 2 ವರ್ಷ 5 ತಿಂಗಳ ಬಳಿಕ ಸದಾಶಿವ ಮೂರ್ತಿ ಅವರನ್ನು ಎಸ್ ಪಿಪಿಯಾಗಿ ನೇಮಕ ಮಾಡಿದೆ. ಇದೂ ಕೂಡ ಪ್ರಕರಣ ವಿಳಂಬವಾಗಲು ಕಾರಣ ಎಂದು ಹೇಳಲಾಗುತ್ತಿದೆ.

ಮದನಿ ಬೆದರಿಕೆಗೆ ಹೆದರಿದರೇ ಸಾಕ್ಷಿಗಳು?
ಉಗ್ರ ಮದನಿ ವಿರುದ್ಧ ದೇಶಾದ್ಯಂತ ಸುಮಾರು 57 ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ಆತ ಬೆಂಗಳೂರು ಸರಣಿ ಸ್ಫೋಟ ಸಂಬಂಧ ಬೆಂಗಳೂರಿನ ಆಸ್ಪತ್ರೆಯಲ್ಲಿ ಗೃಹ ಬಂಧನದಲ್ಲಿದ್ದಾನೆ.  ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆತನ ವಿರುದ್ಧ ಹೇಳಿಕೆ ನೀಡಿದ್ದೆ 27 ಸಾಕ್ಷಿಗಳ ಪೈಕಿ ಕೇವಲ ನಾಲ್ಕು ಸಾಕ್ಷಿಗಳು ಮಾತ್ರ ಈಗಲೂ ಮದನಿ ವಿರುದ್ಧ ಸಾಕ್ಷ್ಯ ಹೇಳಲು  ಸಿದ್ಧವಾಗಿದ್ದಾರೆ. ಉಳಿದ 23 ಸಾಕ್ಷಿಗಳು ಉಲ್ಟಾಹೊಡೆದಿದ್ದು, ಇದೀಗ ಮದನಿ ಪ್ರಕರಣದಿಂದಲೇ ಖುಲಾಸೆಯಾಗುವ ಭೀತಿ ಕೂಡ ಎದುರಾಗಿದೆ.

2008ರ ಜುಲೈ 25ರಂದು ಬೆಂಗಳೂರಿನಲ್ಲಿ ನಡೆದಿದ 9 ಸರಣಿ ಬಾಂಬ್ ಸ್ಫೋಟದಲ್ಲಿ, ಇಬ್ಬರು ಸಾವಿಗೀಡಾಗಿ 9 ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com