ಇನ್ನು ಮೈಸೂರು-ಬೆಂಗಳೂರಿಗಿಲ್ಲ ಕಬಿನಿ ನೀರು!

ಮೈಸೂರು ಮತ್ತು ರಾಜಧಾನಿ ಬೆಂಗಳೂರಿನ ಜನತೆಯ ದಾಹ ನೀಗಿಸುತ್ತಿದ್ದ ಕಬಿನಿ ಜಲಾಶಯ ಇದೀಗ ಬರಿದಾದ ಹಿನ್ನಲೆಯಲ್ಲಿ ಜಲಾಶಯದ ಗೇಟ್ ಗಳನ್ನು ಮುಚ್ಚಲಾಗಿದೆ.
ಕಬಿನಿಯಲ್ಲಿ ನೀರಿಗಾಗಿ ಬಂದಿರುವ ಆನೆಗಳ ಹಿಂಡು (ಸಂಗ್ರಹ ಚಿತ್ರ)
ಕಬಿನಿಯಲ್ಲಿ ನೀರಿಗಾಗಿ ಬಂದಿರುವ ಆನೆಗಳ ಹಿಂಡು (ಸಂಗ್ರಹ ಚಿತ್ರ)

ಮೈಸೂರು: ಮೈಸೂರು ಮತ್ತು ರಾಜಧಾನಿ ಬೆಂಗಳೂರಿನ ಜನತೆಯ ದಾಹ ನೀಗಿಸುತ್ತಿದ್ದ ಕಬಿನಿ ಜಲಾಶಯ ಇದೀಗ ಬರಿದಾದ ಹಿನ್ನಲೆಯಲ್ಲಿ ಜಲಾಶಯದ ಗೇಟ್ ಗಳನ್ನು ಮುಚ್ಚಲಾಗಿದೆ.

ಹೀಗಾಗಿ ಮಳೆ ಬರುವವರೆಗೂ ಮೈಸೂರು ಮತ್ತು ಬೆಂಗಳೂರಿಗೆ ಕಬಿನಿ ಜಲಾಶಯದ ನೀರನ್ನು ಸ್ಥಗಿತಗೊಳಿಸಲಾಗಿದೆ. ಜಲಾಶಯದ ಅಧಿಕಾರಿಗಳ ಪ್ರಕಾರ ಪ್ರಸ್ತುತ ಕಬಿನಿ ಜಲಾಶಯದ  ನೀರಿನ ಮಟ್ಟ ತೀರ ಕೆಳಕ್ಕೆ ಇಳಿದಿದ್ದು, ಜಲಾಶಯದಲ್ಲಿ ಇದೀಗ ಕೇವಲ 5.5 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದೆ. ಇನ್ನು ಮೈಸೂರು ಮತ್ತು ಬೆಂಗಳೂರು ಸುತ್ತಮುತ್ತಲ ಕಾವೇರಿ  ಅರಣ್ಯಧಾಮದಲ್ಲಿನ ಲಕ್ಷಾಂತರ ವನ್ಯಜೀವಿಗಳಿಗೆ ಈ ನೀರೇ ಆಧಾರವಾಗಿದ್ದು, ಇದೇ ಕಾರಣಕ್ಕೆ ಮೈಸೂರು ಮತ್ತು ಬೆಂಗಳೂರಿಗೆ ಬಿಡಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲು ಅಧಿಕಾರಿಗಳು  ನಿರ್ಧರಿಸಿದ್ದಾರೆ.

ಕಾವೇರಿ ಅರಣ್ಯಧಾಮದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಆನೆಗಳಿದ್ದು, ಸಾವಿರಾರು ಜಿಂಕೆಗಳು, ಕೃಷ್ಣಮೃಗಗಳು, ನೂರಾರು ಹುಲಿಗಳು ಮತ್ತು ಇತರೆ ಪ್ರಾಣಿಗಳು ಆಶ್ರಯ ಪಡೆದಿವೆ. ಈ ಎಲ್ಲ  ಪ್ರಾಣಿಗಳಿಗೂ ಬೇಸಿಗೆಯಲ್ಲಿ ಕುಡಿಯಲು ನೀರು ಒದಗಿಸುವ ನಿಟ್ಟಿನಲ್ಲಿ ಮೈಸೂರು ಮತ್ತು ಬೆಂಗಳೂರಿಗೆ ಬಿಡಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ.

ತೀವ್ರ ಬರಗಾಲ ಮತ್ತು ಮಳೆ ಕೊರತೆಯಿಂದಾಗಿ ಜಲಾಶಯಕ್ಕೆ ಬರುತ್ತಿದ್ದ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಮೈಸೂರು ಮತ್ತು ಬೆಂಗಳೂರಿಗೆ ನೀರು ಹರಿಯುವುದನ್ನು  ನಿಲ್ಲಿಸದಿದ್ದರೆ ಜಲಾಶಯ ಬರಿದಾಗಿ, ಪ್ರಾಣಿಗಳು ನೀರಿಗಾಗಿ ಅಕ್ಕಪಕ್ಕದ ಗ್ರಾಮಗಳಿಗೆ ನುಗ್ಗುವ ಭೀತಿ ಮತ್ತು ಅಕ್ಕ-ಪಕ್ಕದ ಗ್ರಾಮಗಳ ರೈತರ ಬೆಳೆ ನಾಶ ಮಾಡುವ ಸಾಧ್ಯತೆ ಇದೆ. ಹೀಗಾಗಿ  ಅನಿವಾರ್ಯವಾಗಿ ಬೆಂಗಳೂರು ಮತ್ತು ಮೈಸೂರಿಗೆ ರವಾನೆಯಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಮ್ಮ ಅಸಾಹಯಕತೆ ತೋಡಿಕೊಂಡಿದ್ದಾರೆ.

ಇನ್ನು ಇಂತಹುದೇ ಬೀಕರ ಪರಿಸ್ಥಿತಿ ಕೆಆರ್ ಎಸ್ ನಲ್ಲೂ ಇದ್ದು, ಇನ್ನೊಂದು ತಿಂಗಳಿಗೆ ಸಾಕಾಗುವಷ್ಚು ನೀರು ಮಾತ್ರ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿದೆ ಎಂದು ತಿಳಿದುಬಂದಿದೆ. ಇನ್ನು  ಮಾನ್ಸೂನ್ ಮಳೆ ವಿಳಂಬ ಕೂಡ ನೀರಿನ ಕೊರೆತೆ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com