ಗೋನಾಳ್ ಭೀಮಪ್ಪ ನನ್ನ ತಂಗಿ ಗಂಡ, ಅವರ ರಕ್ಷಣೆಗೆ ಪ್ರಯತ್ನಿಸುತ್ತೇವೆ: ಸಚಿವ ಎಚ್ ಆಂಜನೇಯ

ಕೆಪಿಎಸ್ ಸಿ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗೋನಾಳ್ ಭೀಮಪ್ಪ ತಮ್ಮ ತಂಗಿ ಗಂಡನಾಗಿದ್ದು, ಅವರ ರಕ್ಷಣೆಗೆ ಪ್ರಯತ್ನಿಸುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಹೇಳಿದ್ದಾರೆ..
ಸಚಿವ ಎಚ್ ಆಂಜನೇಯ (ಸಂಗ್ರಹ ಚಿತ್ರ)
ಸಚಿವ ಎಚ್ ಆಂಜನೇಯ (ಸಂಗ್ರಹ ಚಿತ್ರ)

ಬೆಂಗಳೂರು: ಕೆಪಿಎಸ್ ಸಿ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗೋನಾಳ್ ಭೀಮಪ್ಪ ತಮ್ಮ ತಂಗಿ ಗಂಡನಾಗಿದ್ದು, ಅವರ ರಕ್ಷಣೆಗೆ ಪ್ರಯತ್ನಿಸುತ್ತೇವೆ ಎಂದು  ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಹೇಳಿದ್ದಾರೆ.

ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆಯಂತೆ ವರ್ತಿಸುತ್ತಿವೆ ಎಂಬಂತಹ ವಿವಾದಾತ್ಮಕ ಹೇಳಿಕೆ ನೀಡಿ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಮತ್ತೊಂದು ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದು, ಕೆಪಿಎಸ್ ಸಿ ಅಕ್ರಮ ನೇಮಕಾತಿ ಪ್ರಕರಣ ಸಂಬಂದ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಮತ್ತು ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಪ್ರಕರಣದ ಪ್ರಮುಖ ಆರೋಪಿ ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಅವರ ರಕ್ಷಣೆಗೆ ತಾವು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

 

ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದ ಮಾದಿಗ ಸಮುದಾಯದ ಜನ ಪ್ರತಿನಿಧಿಗಳ ಸಮ್ಮೇಳನದಲ್ಲಿ ಮಾತನಾಡಿದ ಸಚಿವ ಎಚ್ ಆಂಜನೇಯ ಅವರು,  "ಗೋನಾಳ್ ಭೀಮಪ್ಪ ಅವರು ಪ್ರಾಮಾಣಿಕ ಅಧಿಕಾರಿಯಾಗಿದ್ದು, ಇವರಂತಹ ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಿದ್ದ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರ ಸ್ವಾಮಿ ಅವರ  ಕಾರ್ಯ ಶ್ಲಾಘನಾರ್ಹವಾದದ್ದು. ಇವರ ಅವಧಿಯಲ್ಲಿ ನೇಮಕವಾದ ದುರ್ಗಪ್ಪ ಹಾಗೂ ಗೋನಾಳ್ ಭೀಮಪ್ಪ ಅವರಿಂದ ನಮ್ಮ ಸಮುದಾಯದ ಏಳಿಗೆಗೆ ಸಹಾಯಕವಾಗಿದೆ. ಇಂದು  ಕೂಲಿಕಾರ್ಮಿಕನ ಮಗ ಐಎಎಸ್ ಆಗಿದ್ದಾನೆ. ಅಂತೆಯೇ ನಮ್ಮ ಸಮುದಾಯದ ಸಾಕಷ್ಟು ಮಂದಿ ಇಂದು ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಇದಕ್ಕೆಲ್ಲಾ ಕಾರಣ  ದುರ್ಗಪ್ಪ ಹಾಗೂ ಗೋನಾಳ್ ಭೀಮಪ್ಪ ಅವರು. ಇಬ್ಬರೂ ತಮ್ಮ ಸಂಬಂಧಿಗಳಾಗಿದ್ದು, ದುರ್ಗಪ್ಪ ಅವರು ನಮ್ಮ ಚಿಕ್ಕಪ್ಪ ಹಾಗೂ ಗೋನಾಳ್ ಭೀಮಪ್ಪ ಅವರು ನನ್ನ ತಂಗಿ ಗಂಡ. ಅವರ  ರಕ್ಷಣೆಗೆ ಸರ್ಕಾರದ ವತಿಯಿಂದ ತಾವು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಇದಕ್ಕೂ ಮೊದಲು ಸಮ್ಮೇಳನದ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ್ ಅವರು, ಗೋನಾಳ್ ಭೀಮಪ್ಪ ಅವರಿಗೆ ಕೆಪಿಎಸ್ ಸಿ  ಪ್ರಕರಣ ಸಂಬಂಧ ರಕ್ಷಣೆ ಕೊಡುವಂತೆ ಹಾಗೂ ಅವರನ್ನು ಬಂಧಿಸದಂತೆ ನೋಡಿಕೊಳ್ಳಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು. ಇದರ ಹಿನ್ನಲೆಯಲ್ಲಿ ಮಾತನಾಡಿದ ಸಚಿವ ಎಚ್ ಆಂಜನೇಯ  ಅವರು ನನ್ನ ತಂಗಿ ಗಂಡ, ಅವರ ರಕ್ಷಣೆಗೆ ತಾವು ಪ್ರಯತ್ನಿಸುವುದಾಗಿ ಹೇಳಿದರು.

ಇನ್ನು ಸಚಿವ ಎಚ್ ಆಂಜನೇಯ ಅವರ ಈ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಕೆಪಿಎಸ್ ಸಿ ಅಕ್ರಮ ನೇಮಕಾತಿ ಹಗರಣ ನ್ಯಾಯಾಲದಲ್ಲಿ ವಿಚಾರಣೆಯ ಹಂತದಲ್ಲಿದ್ದು,  ಇಂತಹ ಸಂದರ್ಭದಲ್ಲಿ ಸಚಿವ ಎಚ್ ಆಂಜನೇಯ ಅವರ ಹೇಳಿಕೆ ಎಷ್ಟು ಸಮಂಜಸ. ಒಂದು ವೇಳೆ ಗೋನಾಳ್ ಭೀಮಪ್ಪ ಅವರು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದರೆ ಆಗ  ಆಂಜನೇಯ ಅವರ ಹೇಳಿಕೆಯನ್ನು ಒಪ್ಪಬಹುದಿತ್ತಾದರೂ, ನ್ಯಾಯಾಲಯದ ವಿಚಾರಣೆ ಹಂತದಲ್ಲಿರುವ ಪ್ರಕರಣದ ಆರೋಪಿಯ ಕುರಿತ ಇಂತಹ ಹೇಳಿಕೆ ಎಷ್ಟು ಸಮಂಜಸ ಎಂದು  ನಾಗರೀಕರು ಪ್ರಶ್ನಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com