ನಾಶಗೊಂಡಿರುವ ಕೆಂಪಾಂಬುಧಿ ಕೆರೆ
ನಾಶಗೊಂಡಿರುವ ಕೆಂಪಾಂಬುಧಿ ಕೆರೆ

ನಗರದ ಹಳೇ ಕೆರೆಗಳ ಮೇಲೂ ಬಿತ್ತು ಭೂಗಳ್ಳರ ಕಣ್ಣು

ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದ ಇತಿಹಾಸ ಪ್ರಸಿದ್ಧ ಕೆಂಪಾಂಬುಧಿ ಕೆರೆ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು, ಕೆರೆಯ ಒಡಲು ಭೂಗಳ್ಳರ ಕಪಿಮುಷ್ಟಿಗೆ ಸಿಲುಕುವ...
Published on

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದ ಇತಿಹಾಸ ಪ್ರಸಿದ್ಧ ಕೆಂಪಾಂಬುಧಿ ಕೆರೆ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು, ಕೆರೆಯ ಒಡಲು ಭೂಗಳ್ಳರ ಕಪಿಮುಷ್ಟಿಗೆ ಸಿಲುಕುವ ಭೀತಿ ಇದೀಗ ಎದುರಾಗಿದೆ.

ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ನಾಡಪ್ರಭು ಕೆಂಪೇಗೌಡ ಅವರು ತಮ್ಮ ಮನೆದೇವರಾದ ಕೆಂಪಮ್ಮ ಅವರ ಹೆಸರಿನಲ್ಲಿ 12 ನೇ ಶತಮಾನದಲ್ಲಿ ಕೆಂಪಾಂಬುಧಿ ಕೆರೆಯನ್ನು ನಿರ್ಮಿಸಿದ್ದರು. ಕೆಂಪಾಂಬುಧಿ ಕೆರೆಯ ಸುತ್ತಮುತ್ತಲೂ 5 ದೇವಾಲಗಳಿವೆ. ಕೆರೆ ಬತ್ತಿ ಹೋಗಿ 25 ರಿಂದ 30 ವರ್ಷಗಳು ಕಳೆದಿವೆ. ಪ್ರಸ್ತುತ ಕೆರೆ ಜಾಗದಲ್ಲಿ ಶುದ್ಧ ನೀರಿನ ಬದಲು ಕೊಳಚೆ ನೀರು, ಕಣ್ಣಿಗೆ ರಾಚುವ ಕಸದ ರಾಶಿ, ಹೂಳು ತುಂಬಿದ ಒಡಲುಗಳೇ ಕಂಡು ಬರುತ್ತಿವೆ.

ಇತಿಹಾಸ ಹೊಂದಿರುವ ಈ ಕೆರೆಯನ್ನು ಸಂರಕ್ಷಣೆ ಮಾಡುತ್ತಿದ್ದೇವೆಂದು ಸರ್ಕಾರ ಎಷ್ಟೇ ಹೇಳುತ್ತಿದ್ದರು. ಕೆರೆ ಜಾಗದಲ್ಲಿರುವ ಪರಿಸ್ಥಿತಿ ಸರ್ಕಾರ ಎಷ್ಟರ ಮಟ್ಟಿಗೆ ಸಂರಕ್ಷಣೆ ಮಾಡುತ್ತಿದೆ ಎಂಬುದು ತೋರಿಸುತ್ತಿದೆ.

ಇನ್ನು ಕೆರೆ ಜಾಗದಲ್ಲಿ ಹಲವು ವರ್ಷಗಳಿಂದಲೂ ಅಗಸರು (ದೋಬಿ) ಕೆಲಸ ಮಾಡುತ್ತಿದ್ದು, ಕೆರೆಯ ನೀರನ್ನು ಬಳಸಿಕೊಂಡು ಬಟ್ಟೆಯನ್ನು ಒಗೆಯುವ ಕೆಲಸ ಮಾಡುತ್ತಿದ್ದಾರೆ.

ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಅದರಲ್ಲೂ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಫಲಿತಾಂಶ ಬಂದಾಗಲಂತೂ ಇದರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹಲವು ವರ್ಷಗಳಿಂದಲೂ ನೆಲೆಯೂರಿರುವ ನಿವಾಸಿಯೊಬ್ಬರು ಹೇಳಿಕೊಂಡಿದ್ದಾರೆ.

ಕೆರೆ 47 ಎಕರೆ ಹಾಗೂ 7 ಗುಂಟೆ ಜಾಗವನ್ನು ಹೊಂದಿದ್ದು, ಈ ಕೆರೆ ಸರ್ಕಾರದ ಅಧೀನದಲ್ಲಿಗೆ ಎಂದು ಶಾಸಕ ಆರ್.ವಿ. ದೇವರಾಜ್ ಅವರು ಹೇಳಿದ್ದಾರೆ.

ಇನ್ನು ಕೆಂಪಾಂಬುಧಿ ಕೆರೆ ನಿರ್ಮಾಣವಾದ ಬಳಿಕ ದಕ್ಷಿಣ ಭಾಗದಲ್ಲಿ ಬಂಡಿ ಮಹಾಕಾಳಮ್ಮ ದೇಗುಲ ನಿರ್ಮಾಣವಾಗಿದ್ದು, ಕೆಲವರು ಬಂಡಿ ಮಹಾಕಾಳಮ್ಮ ದೇವಾಲಯ ಟ್ರಸ್ಟ್ ರಚಿಸಿಕೊಂಡು ಗವಿಪುರಂ ಹಳ್ಳಿಗೆ ಸೇರಿದ 4 ಎಕರೆ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಳ್ಳಲಾಗಿದೆ ಆದಾಯ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಕೆರೆಯ ಕಳೆ ನಾಶವಾಗಿದೆ. ಇದೀಗ ಕೆರೆ ಜಾಗ ಕಸ ಹಾಕುವ ಜಾಗವಾಗಿ ಮಾರ್ಪಟ್ಟಿದೆ. ಬಸವನ ಗುಡಿ ರಸ್ತೆ, ಹನುಮಂತನಗರ, ಚಾಮರಾಜಪೇಟೆ ಹಾಗೂ ಇನ್ನಿತರೆ ಸ್ಥಳಗಳ ಒಳಚರಂಡಿಗಳ ನೀರು ಕೆರೆ ಬರುತ್ತಿದ್ದು, ಮಳೆ ಬಂದಾಗ ಕೊಳಚೆ ನೀರು ಸ್ಥಳೀಯ ಮನೆಗಳಿಗೆ ನುಗ್ಗುತ್ತವೆ. ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್ ಬಿ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಎಂದು ಇಂಜಿನಿಯರ್ ರಾಮಕೃಷ್ಣ ಅವರು ಹೇಳಿದ್ದಾರೆ.

ಕೆರೆಯಲ್ಲಿ ಸೃಷ್ಟಿಯಾಗಿರುವ ಕಸ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆ ಬಗೆಹರಿಸಲು  ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್ ಬಿ ಜೊತೆಗೂಡಿ ಕೆಲಸ ಮಾಡುತ್ತಿದೆ. ಹಾಗೂ ಬಿಡಬ್ಲ್ಯೂಎಸ್ಎಸ್ ಬಿ ಒಳಚರಂಡಿಗಳ ಸಂಪರ್ಕವನ್ನು ಬದಲಿಸುವ ಕೆಲಸಗಳನ್ನು ಮಾಡುತ್ತಿದೆ. ಇದಕ್ಕಾಗಿ ಸರ್ಕಾರ ರು. 7 ಕೋಟಿಯನ್ನು ನೀಡಿದೆ. ಸಮಸ್ಯೆ ಬಗೆಹರಿದ ಕೂಡಲೇ ಶುದ್ಧ ನೀರನ್ನು ಕೆರೆಗೆ ಬಿಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೆರೆಯಲ್ಲಿ ನೀರು ಹೋಗಲು ಈಗಾಗಲೇ ದಾರಿ ಮಾಡಲಾಗಿದ್ದು, ಸ್ವಚ್ಛತಾ ಕಾರ್ಯ ಕೆಲಸಗಳು ಕೆಳೆದ 2015ರ ಡಿಸೆಂಬರ್ ತಿಂಗಳಿನಲ್ಲಿಯೇ ಆರಂಭವಾಗಿದೆ ಎಂದು ಬಿಬಿಎಂಪಿ ಗುತ್ತಿದಾರ ಬಾಬು ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿರುವ ಶೇಶಾದ್ರಿ ನಾಯ್ಡು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com