
ಬಳ್ಳಾರಿ: ಛತ್ತೀಸ್ ಘಡ ಸಂತಾನ ಹರಣ ಶಸ್ತ್ರ ಚಿಕಿತ್ಸೆ ದುರಂತವನ್ನು ನೆನಪಿಸುವ ಮತ್ತೊಂದು ಪ್ರಕರಣ ಕರ್ನಾಟಕದಲ್ಲಿ ಬೆಳಕಿಗೆ ಬಂದಿದ್ದು, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಾಳೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದ್ದು, ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಮೂರು ತಿಂಗಳ ಬಾಣಂತಿಯೊಬ್ಬರು ಅರಿವಳಿಕೆ ಚುಚ್ಚುಮದ್ದಿನಿಂದ ಅಸ್ವಸ್ಥಗೊಂಡು ಶನಿವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇತರೆ ಆರು ಬಾಣಂತಿಯರು ಕೂಡ ಇದೀಗ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತ ಮಹಿಳೆಯರನ್ನು ನುಂಕನಹಳ್ಳಿ ಗ್ರಾಮದ ಜಯಮ್ಮ (24) ಎಂದು ಗುರುತಿಸಲಾಗಿದ್ದು, ಇವರಿಗೆ 2 ವರ್ಷದ ಹೆಣ್ಣು ಹಾಗೂ 3 ತಿಂಗಳ ಗಂಡು ಮಗುವಿದ್ದು, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಾಗಿ ಶುಕ್ರವಾರ ಗುಡೆಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ 4 ಗಂಟೆಗೆ ಶಸಚಿಕಿತ್ಸೆಗೂ ಮುನ್ನ ವೈದ್ಯರು ಚುಚ್ಚುಮದ್ದು ನೀಡುತ್ತಿದ್ದಂತೆ ವಾಂತಿ ಮಾಡಲಾರಂಭಿಸಿದ್ದಾರೆ. ರಾತ್ರಿ 11 ಗಂಟೆಗೆ ರಕ್ತವಾಂತಿ ಕಾಣಿಸಿಕೊಂಡಾಗ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಜಯಮ್ಮ ಕೊನೆಯುಸಿರೆಳೆದಿದ್ದಾರೆ.
ಗುಡೆಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಡಾ. ಪ್ರಕಾಶ್‌ರೆಡ್ಡಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಶಸ್ತ್ರಚಿಕಿತ್ಸೆ ಶಿಬಿರಕ್ಕೆ 26 ಬಾಣಂತಿಯರು ಹೆಸರು ನೋಂದಾಯಿಸಿದ್ದರು. ಈ ಪೈಕಿ ಮೂವರು ಶಸ್ತ್ರಚಿಕಿತ್ಸೆಗೆ ಅರ್ಹರಾಗಿಲ್ಲ ಎಂದು ವೈದ್ಯರು ವಾಪಸ್ ಕಳುಹಿಸಿದ್ದರು. ಉಳಿದ 23 ಜನರಿಗೆ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಇಂದಿರಾ, ಗೀತಮ್ಮ, ಗಂಗಮ್ಮ ಹಾಗೂ ಮಲಿಯಕ್ಕ ಅವರಿಗೆ ಶಸಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಪೈಕಿ ಚುಚ್ಚುಮದ್ದು ಪಡೆದಿದ್ದ ಜಯಮ್ಮ, ಹೇಮಾಕ್ಷಿ, ಬೋರಮ್ಮ ಹಾಗೂ ಶಸಚಿಕಿತ್ಸೆಗೆ ಒಳಗಾಗಿದ್ದ ಮಲಿಯಕ್ಕ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಹೇಮಾಕ್ಷಿ, ಮಲಿಯಕ್ಕ ಹಾಗೂ ಬೋರಮ್ಮ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ. ಆದರೆ, ಜಯಮ್ಮಳನ್ನು ವಿಳಂಬವಾಗಿ ವಿಮ್ಸ್ ಆಸ್ಪತ್ರೆಗೆ ಕರೆತಂದಿದ್ದೇ ಆಕೆಯ ಜೀವಕ್ಕೆ ಮುಳುವಾಯಿತು ಎಂದು ಸಂಬಂಧಿಕರು ದೂರಿದ್ದಾರೆ. ಶಸ್ತ್ರಚಿಕಿತ್ಸೆಗೂ ಮುನ್ನ ನೀಡಲಾಗಿದ್ದ ಅರಿವಳಿಕೆ ಚುಚ್ಚುಮದ್ದೇ ಈ ಅವಾಂತರಕ್ಕೆ ಕಾರಣ ಎಂಬುದು ಜಯಮ್ಮ ಸಂಬಂಧಿಕರ ಆರೋಪವಾಗಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ವೈದ್ಯಾಧಿಕಾರಿಗಳು ಆರೋಗ್ಯ ಇಲಾಖೆ ಪೂರೈಸಿದ್ದ ಚುಚ್ಚುಮದ್ದನ್ನೇ ನೀಡಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement