ಬಂಧಿತ ಖುಷ್ಬು
ಬಂಧಿತ ಖುಷ್ಬು

200 ಪ್ರಕರಣಗಳಲ್ಲಿ ಬೇಕಾಗಿದ್ದ ವಂಚಕಿ ನಕಲಿ ವಕೀಲೆ ಬಂಧನ

ಸುಮಾರು 200 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸುಪ್ರೀಂ ಕೋರ್ಟ್ ವಕೀಲೆ ಎಂದು ಹೇಳಿಕೊಳ್ಳುತ್ತಿದ್ದ ನಕಲಿ ವಕೀಲೆಯನ್ನು ಶನಿವಾರ ಬೆಂಗಳೂರು...
ಬೆಂಗಳೂರು: ಸುಮಾರು 200 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸುಪ್ರೀಂ ಕೋರ್ಟ್ ವಕೀಲೆ ಎಂದು ಹೇಳಿಕೊಳ್ಳುತ್ತಿದ್ದ ನಕಲಿ ವಕೀಲೆಯನ್ನು ಶನಿವಾರ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸದ್ಯ ವಕೀಲರೊಬ್ಬರಿಗೆ ಎರಡು ಲಕ್ಷ ರುಪಾಯಿ ವಂಚಿಸಿದ ಆರೋಪದ ಮೇಲೆ ನಕಲಿ ವಕೀಲೆ ಖುಷ್ಬು ಓಂ ಪ್ರಕಾಶ್ ಶರ್ಮಾಳನ್ನು ಪುಲಕೇಶಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಖುಷ್ಬು ಒಂದು ಕಡೆ ಐಎಎಸ್ ಅಧಿಕಾರಿ ಮಗಳು. ಇನ್ನೊಂದು ಕಡೆ ಐಪಿಎಸ್ ಅಧಿಕಾರಿ ಮಗಳು ಹಾಗೂ ಮತ್ತೊಂದು ಕಡೆ ಸುಪ್ರೀಂ ಕೋರ್ಟ್‌ನ ವಕೀಲೆ ಎಂದು ಹೇಳಿಕೊಂಡು ಸುಮಾರು 200 ಜನರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ಬಂಧಿತ ಖುಷ್ಬು ಶರ್ಮಾ ಅಲಿಯಾಸ್ ಸ್ಮೃತಿ ಶರ್ಮಾ(25) ವಿರುದ್ಧ ರಾಜಸ್ಥಾನ, ದೆಹಲಿ, ಆಂಧ್ರಪ್ರದೇಶ, ಪುಣೆ ಸೇರಿದಂತೆ ದೇಶದ ವಿವಿಧೆಡೆ 150ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಇದೀಗ ನಗರದ ಯುಬಿ ಸಿಟಿ ಕಟ್ಟಡದಲ್ಲಿ ಫ್ಲ್ಯಾಟ್ ಕೊಡಿಸುವುದಾಗಿ ವಕೀಲರೊಬ್ಬರಿಗೆ 2.5 ಲಕ್ಷ ರುಪಾಯಿ ವಂಚಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.
ಜೈಪುರ ಮೂಲದ ಖುಷ್ಬು ಶರ್ಮಾ ಕಳೆದ ಏಪ್ರಿಲ್ ನಲ್ಲಿ ಬೆಂಗಳೂರಿಗೆ ಆಗಮಿಸಿದ್ದು, ಇಂದಿರಾನಗರದ ಪಿಜಿಯೊಂದರಲ್ಲಿ ವಾಸವಾಗಿದ್ದಳು. ಈಕೆ ಅಂಗವಿಕಲೆಯಾಗಿದ್ದು, ಅಪಘಾತವೊಂದರಲ್ಲಿ ಆಕೆಯ ಬಲಗೈ ತುಂಡಾಗಿದೆ.
ಇತ್ತೀಚೆಗೆ ನಗರದ ವಕೀಲ ಸಂಕೇತ್ ಯೆಣಗಿ ಅವರನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ ಖುಷ್ಬು, ತಾನು ಸುಪ್ರೀಂ ಕೋರ್ಟ್‌ನ ವಕೀಲೆ ಎಂದು ಹೇಳಿಕೊಂಡಿದ್ದಳು. 
ಸ್ವಂತ ಕಚೇರಿ ಪ್ರಾರಂಭಿಸಲು ನಿರ್ಧರಿಸಿದ್ದ ಸಂಕೇತ್ ಗೆ ಪ್ರತಿಷ್ಠಿತ ರಸ್ತೆಗಳಲ್ಲಿ ಮಳಿಗೆಯನ್ನು ಹುಡುಕುತ್ತಿದ್ದರು. ಈ ವಿಷಯ ತಿಳಿದ ಆಕೆ, ‘ನನ್ನ ತಂದೆ ಐಎಎಸ್ ತೆರಿಗೆ ಅಧಿಕಾರಿ. ಅವರಿಗೆ ಯುಬಿ ಸಿಟಿ ಕಟ್ಟಡದ ಮಾಲೀಕರ ಪರಿಚಯವಿದೆ. ಅವರ ಮುಖಾಂತರ ಅದೇ ಕಟ್ಟಡದಲ್ಲಿ ಒಂದು ಮಳಿಗೆ ಕೊಡಿಸುತ್ತೇನೆ. ನಂತರ ನಿಮಗೆ ಬರುವ ಆದಾಯದಲ್ಲಿ ನನಗೂ ಇಂತಿಷ್ಟು ಪಾಲು ಕೊಟ್ಟರೆ ಸಾಕು’ ಎಂದು ನಂಬಿಸಿದ್ದಳು.
‘ಹೀಗೆ ವಿಶ್ವಾಸ ಗಿಟ್ಟಿಸಿಕೊಂಡ ಖುಷ್ಬು, ಅ.26ರಂದು ಪುನಃ ಅವರನ್ನು ಭೇಟಿಯಾಗಿದ್ದಳು. ‘ಮಳಿಗೆ ಕೊಡಿಸಲು ತಂದೆ ಒಪ್ಪಿದ್ದಾರೆ. ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಖರ್ಚಿಗೆ ಹಣ ಬೇಕು’ ಎಂದು ಬೇಡಿಕೆ ಇಟ್ಟಿದ್ದಳು. ಆಕೆಯ ಸಂಚಿನ ಬಗ್ಗೆ ಅರಿಯದ ವಕೀಲ,1.45 ಲಕ್ಷ ರುಪಾಯಿ ಕೊಟ್ಟಿದ್ದರು. ಅಲ್ಲದೆ, 80 ಸಾವಿರ ರುಪಾಯಿ ಮೌಲ್ಯದ ಆ್ಯಪಲ್ ಫೋನ್‌ ಸಹ ಕೊಡಿಸಿದ್ದರು.’
‘ಎರಡು ದಿನಗಳ ಬಳಿಕ ಖುಷ್ಬುಗೆ ಕರೆ ಮಾಡಿದ ವಕೀಲ, ಒಮ್ಮೆ ಮಳಿಗೆಯನ್ನು ನೋಡಬೇಕು ಎಂದಿದ್ದರು. ಅವರ ಕಾರಿನಲ್ಲೇ ಯುಬಿ ಸಿಟಿ ಕಟ್ಟಡದ ಬಳಿ ಹೋಗಿದ್ದ ಖುಷ್ಬು, ‘ನಾನು ಒಳಗೆ ಬರುವುದಿಲ್ಲ. ನೀವು ಹೋಗಿ ಮಳಿಗೆ ನೋಡಿಕೊಂಡು ಬನ್ನಿ’ ಎಂದಿದ್ದಳು. ಅದನ್ನು ನಂಬಿ ಅವರು ಕಟ್ಟಡದೊಳಗೆ ಹೋಗುತ್ತಿದ್ದಂತೆಯೇ ಈಕೆ ಕಾರಿನಲ್ಲಿದ್ದ ಅವರ ಕರಿಕೋಟು ಹಾಗೂ ಸೂಟ್‌ಕೇಸ್ ತೆಗೆದುಕೊಂಡು ಪರಾರಿಯಾಗಿದ್ದಳು. ಅವರ ಕೋಟಿನಲ್ಲಿ 25 ಸಾವಿರ ರುಪಾಯಿ ನಗದು ಇತ್ತು.’
‘ಇತ್ತ ಮಳಿಗೆ ಹುಡುಕಿಕೊಂಡು ಯುಬಿ ಸಿಟಿ ಕಟ್ಟಡಕ್ಕೆ ಹೋಗಿದ್ದ ವಕೀಲ, ಸರಿಯಾದ ಮಾಹಿತಿ ಸಿಗದೆ ಸ್ವಲ್ಪ ಸಮಯದಲ್ಲೇ ಕಾರಿನ ಬಳಿ ಬಂದಿದ್ದಾರೆ. ಖುಷ್ಬು ಕಾಣಿಸದಿದ್ದಾಗ ಆಕೆಗೆ ಕರೆ ಮಾಡಿದ್ದಾರೆ. ಮೊಬೈಲ್ ಸ್ವಿಚ್ಡ್‌ ಆಫ್‌ ಆಗಿದ್ದರಿಂದ ಅನುಮಾನಗೊಂಡ ಅವರು, ನಡೆದ ಘಟನೆ ಬಗ್ಗೆ ಪರಿಚಿತ ವಕೀಲರ ಬಳಿ ಹೇಳಿಕೊಂಡಿದ್ದಾರೆ.’
‘ಖುಷ್ಬು ಶರ್ಮಾಳ ಹೆಸರು ಕೇಳುತ್ತಿದ್ದಂತೆಯೇ ವಕೀಲರೊಬ್ಬರು ಆಕೆ ‘ಮಹಾನ್ ವಂಚಕಿ’ ಎಂದಿದ್ದಾರೆ. ಅಲ್ಲದೆ, ಆಕೆ ಜೈಪುರದಲ್ಲಿ ಹಲವರಿಗೆ ವಂಚಿಸಿರುವ ಬಗ್ಗೆ ಸುದ್ದಿ ವಾಹಿನಿಗಳ ವರದಿಯನ್ನು ಯ್ಯೂಟ್ಯೂಬ್‌ನಲ್ಲಿ ತೋರಿಸಿದ್ದಾರೆ.  ಆ ನಂತರ ವಕೀಲ ಪುಲಕೇಶಿ ನಗರ ಠಾಣೆಯ ಮೆಟ್ಟಿಲೇರಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com