ಷರತ್ತು ಉಲ್ಲಂಘನೆ, ಮುಂಜಾಗ್ರತಾ ಕೊರತೆಯೇ ದುರಂತಕ್ಕೆ ಕಾರಣ?

ಮಾಸ್ತಿಗುಡಿ ಚಿತ್ರೀಕರಣ ವೇಳೆ ಇಬ್ಬರು ನಟರ ದುರಂತ ಸಾವು ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದು, ದುರಂತಕ್ಕೆ ನಿರ್ದೇಶಕ ಹಾಗೂ ಸಾಹಸ ನಿರ್ದೇಶಕರ ಮುಂಜಾಗ್ರತಾ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಮಾಸ್ತಿಗುಡಿ ಚಿತ್ರೀಕರಣ ದುರಂತ (ಸಂಗ್ರಹ ಚಿತ್ರ)
ಮಾಸ್ತಿಗುಡಿ ಚಿತ್ರೀಕರಣ ದುರಂತ (ಸಂಗ್ರಹ ಚಿತ್ರ)
Updated on

ರಾಮನಗರ: ಮಾಸ್ತಿಗುಡಿ ಚಿತ್ರೀಕರಣ ವೇಳೆ ಇಬ್ಬರು ನಟರ ದುರಂತ ಸಾವು ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದು, ದುರಂತಕ್ಕೆ ನಿರ್ದೇಶಕ ಹಾಗೂ ಸಾಹಸ ನಿರ್ದೇಶಕರ ಮುಂಜಾಗ್ರತಾ ಕ್ರಮದ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ.

ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಚಿತ್ರೀಕರಣ ನಡೆಸಲು ಬೆಂಗಳೂರು ಜಲಮಂಡಳಿ ವಿಧಿಸಿದ್ದ ಷರತ್ತುಗಳನ್ನು ಚಿತ್ರತಂಡ ಉಲ್ಲಂಘಿಸಿದ್ದೇ ನಟರಾದ ಅನಿಲ್ ಹಾಗೂ ಉದಯ್ ಅವರ ಸಾವಿಗೆ ಕಾರಣ ಎಂಬ ಗಂಭೀರ ಆರೋಪ  ಕೇಳಿಬಂದಿದೆ. ಅಲ್ಲದೆ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರ ತಂಡ ತೆಗೆದುಕೊಂಡಿದ್ದ ಮುಂಜಾಗ್ರತಾ ಕ್ರಮಗಳು ಕೂಡ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಸಾಹಸ ನಿರ್ದೇಶಕ ರವಿಮರ್ಮಾ ಬೇಕಾಬಿಟ್ಟಿ ಮುಂಜಾಗ್ರತಾ  ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಚಿತ್ರರಂಗದ ಗಣ್ಯರೇ ಆರೋಪಿಸಿದ್ದಾರೆ.

ಮತ್ತೊಂದೆಡೆ ಇಡೀ ಚಿತ್ರತಂಡದ ವಿರುದ್ಧ ಸ್ವತಃ ತಿಪ್ಪಗೊಂಡನಹಳ್ಳಿ ಜಲಾಶಯದ ಅಧೀಕ್ಷಕರೇ ದೂರು ನೀಡಿದ್ದು, ಮಂಡಳಿಯ ಷರತ್ತುಗಳನ್ನು ಚಿತ್ರತಂಡ ಉಲ್ಲಂಘಿಸಿದೆ ಎಂದು ಆರೋಪಿಸಿ ದೂರು ದಾಖಲು ಮಾಡಲಾಗಿದೆ.  ಚಿತ್ರೀಕರಣಕ್ಕೆ ಮಂಡಳಿ 13 ಷರತ್ತುಗಳನ್ನು ವಿಧಿಸಿತ್ತು. ಆದರೆ ಷರತ್ತುಗಳನ್ನು ಚಿತ್ರತಂಡ ಉಲ್ಲಂಘಿಸಿದೆ ಎಂದು ತಿಪ್ಪಗೊಂಡನಹಳ್ಳಿ ಜಲಾಶಯದ ಅಧೀಕ್ಷಕರಾದ ಅನಸೂಯ ಅವರು ಪೊಲೀಸ್ ದೂರು ನೀಡಿದ್ದಾರೆ.  ಷರತ್ತುಗಳಲ್ಲಿ ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸುವಂತಿಲ್ಲ ಎಂಬ ಅಂಶವಿದ್ದರೂ ಚಿತ್ರತಂಡ ಆತ್ಯಂತ ಆಳವಿರುವ ಮತ್ತು ಅಪಾಯಕಾರಿ ಪ್ರದೇಶದಲ್ಲಿ ಚಿತ್ರೀಕರಣದ ನಡೆಸಿತ್ತು. ಇದೇ ದುರಂತಕ್ಕೆ ಕಾರಣ ಎಂಬ ಆರೋಪ  ಕೂಡ ಕೇಳಿ ಬರುತ್ತಿದೆ.

ಇನ್ನು ಸಾಹಸ ನಿರ್ದೇಶಕ ರವಿವರ್ಮಾ ಅವರ ಯೋಜನೆ ಕುರಿತು ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಸೂಕ್ತ ರೀತಿಯ ಮುಂಜಾಗ್ರತೆ ವಹಿಸದೇ ಇದ್ದುದ್ದರಿಂದಲೇ ನಟರಾದ ಅನಿಲ್ ಹಾಗೂ ಉದಯ್ ಸಾವಿಗೆ ಕಾರಣ ಎಂದು  ಹೇಳಲಾಗುತ್ತಿದೆ. ಕೆಲ ಸಾಹಸ ಕಲಾವಿದರು ಅಭಿಪ್ರಾಯಪಟ್ಟಿರುವಂತೆ ಇಂತಹ ದೃಶ್ಯಗಳಿಗೆ ಕನಿಷ್ಠ ಪಕ್ಷ ಮೂರು ಬೋಟ್ ಗಳನ್ನು ಬಳಸಿಕೊಳ್ಳಬೇಕಿತ್ತು. ಆದರೆ ರವಿವರ್ಮಾ ಅವರು ಏಕೆ ಒಂದೇ ಬೋಟ್ ಗೆ ಸೀಮಿತವಾದರು ಎಂದು  ತಿಳಿಯುತ್ತಿಲ್ಲ ಎಂದು ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಹೇಳಿದ್ದಾರೆ. ಅಂತೆಯೇ ಮತ್ತೋರ್ವ ಸಾಹಸ ಕಲಾವಿದ ಢಿಫರೆಂಟ್ ಡ್ಯಾನಿ ಅಭಿಪ್ರಾಯಪಟ್ಟಂತೆ "ಒಂದು ವೇಳೆ ಬೋಟ್ ಕೈಕೊಟ್ಟರೆ ಎಂಬ ಭಾವನೆಯಲ್ಲಿ  ಮತ್ತೊಂದು ಬೋಟ್ ಬಳಕೆ ಮಾಡಿಕೊಳ್ಳಬೇಕಿತ್ತು. ಕೊನೇ ಪಕ್ಷ ಹೆಲಿಕಾಪ್ಟರ್ ನಲ್ಲಾದರೂ 2 ಟ್ಯೂಬ್ ಗಳನ್ನು ಹಾಕಿದ್ದರೆ ಅವುಗಳ ಸಹಾಯದಿಂದ ನಟರನ್ನು ಉಳಿಸಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.

ತಾಂತ್ರಿಕವಾಗಿ ನಿನ್ನೆ ನಡೆದ ಚಿತ್ರೀಕರಣ ದೊಡ್ಡ ಮಟ್ಟದ ಅಪಾಯದ ಸನ್ನಿವೇಶವಾಗಿದ್ದು, ಇದರ ಚಿತ್ರೀಕರಣಕ್ಕೆ ತೆಗೆದುಕೊಳ್ಳಲಾಗಿದ್ದ ಪರಿಕರಗಳು ಇದೀಗ ಹಲವು ಪ್ರಶ್ನೆಗಳನ್ನು ಮೂಡಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com