
ಬೆಂಗಳೂರು: ನಟ ದುನಿಯಾ ವಿಜಿ ಅವರೊಂದಿಗೆ ಚರ್ಚಿಸಿ ಮೃತ ಅನಿಲ್ ಅವರ ಅಂತ್ಯ ಸಂಸ್ಕಾರವನ್ನು ನಡೆಸುತ್ತೇವೆ ಎಂದು ಅನಿಲ್ ಸಹೋದರ ಹರೀಶ್ ಅವರು ಗುರುವಾರ ಹೇಳಿದ್ದಾರೆ.
ಇಂದು ಬೆಳಗ್ಗೆ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಅನಿಲ್ ಮೃತದೇಹ ಕೂಡ ಪತ್ತೆಯಾಗಿದ್ದು, ಸ್ಥಳದಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಅನಿಲ್ ಸಹೋದರ ಹರೀಶ್ ಅವರು ಕೂಡ ಆಗಮಿಸಿದ್ದು, ಅಲ್ಲಿನ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್ ಅವರು, ಪ್ರಸ್ತುತ ಅನಿಲ್ ಮೃತ ದೇಹ ದೊರೆತಿದೆ. ವಿಜಿ ಅವರ ಸಲಹೆ ಮೇರೆಗೆ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ಬಳಿಕ ದೇಹವನ್ನು ನಿವಾಸಕ್ಕೆ ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ವಿಜಿ ಅವರು ಆಗಮಿಸಿದ ಬಳಿಕ ಅವರು ಮತ್ತು ಉದಯ್ ಅವರ ಕುಟುಂಬಸ್ಥರೊಂದಿಗೆ ಚರ್ಚಿಸಿ ಇಬ್ಬರು ನಟರ ಅಂತ್ಯ ಸಂಸ್ಕಾರವನ್ನು ಒಟ್ಟಿಗೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇನ್ನು ಬನಶಂಕರಿ 2ನೇ ಹಂತ ಕದಿರನೇಹಳ್ಳಿ ಕ್ರಾಸ್ ಬಳಿ ಇರುವ ಮೃತ ನಟ ಅನಿಲ್ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಸಾರ್ವಜನಿಕ ದರ್ಶನಕ್ಕೆ ತರಲಾಗುತ್ತದೆ. ಬಳಿಕ ಬನಶಂಕರಿಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
Advertisement