ನಿರ್ಲಕ್ಷ್ಯ, ಕಮಿಷನ್ ದಂಧೆಗೆ ಬಲಿಯಾದರೇ ಕನ್ನಡದ ಉದಯೋನ್ಮುಖ ನಟರು?

ಮಾಸ್ತಿಗುಡಿ ಚಿತ್ರದ ಖಳನಟರಾದ ಅನಿಲ್ ಹಾಗೂ ರಾಘವ ಉದಯ್ ಅವರು ಚಿತ್ರೀಕರಣದ ವೇಳೆ ನಡೆದ ದುರಂತಕ್ಕೆ ಬಲಿಯಾಗಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ...
ಮಾಸ್ತಿಗುಡಿ ದುರಂತ (ಸಂಗ್ರಹ ಚಿತ್ರ)
ಮಾಸ್ತಿಗುಡಿ ದುರಂತ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಮಾಸ್ತಿಗುಡಿ ಚಿತ್ರದ ಖಳನಟರಾದ ಅನಿಲ್ ಹಾಗೂ ರಾಘವ ಉದಯ್ ಅವರು ಚಿತ್ರೀಕರಣದ ವೇಳೆ ನಡೆದ ದುರಂತಕ್ಕೆ ಬಲಿಯಾಗಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಇವರ ಸಾವಿನ ಬೆನ್ನಲ್ಲೇ ಚಿತ್ರರಂಗದ ಕರಾಳ ಮುಖವೊಂದು ಜನತೆಗೆ ಪರಿಚಯವಾಗುತ್ತಿದ್ದು, ಕನ್ನಡದ ಉದಯೋನ್ಮುಖ ನಟರು ಕಮಿಷನ್ ದಂಧೆಗೆ ಬಲಿಯಾದರೇ ಎಂಬ ಶಂಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ.

ಅಪಾಯಕಾರಿ ಚಿತ್ರೀಕರಣದ ಸಂದರ್ಭದಲ್ಲಿ ಸುರಕ್ಷತಾ ಪರಿಕರಗಳನ್ನು ತರುವಾಗ ಕಮಿಷನ್ ಗೆ ಆಸೆಪಟ್ಟ ಕೆಲವರು ಕಳಪೆ ಬೋಟ್ ಅನ್ನು ತಂದು ಚಿತ್ರೀಕರಣಕ್ಕೆ ನೀಡಿದ್ದಾರೆ. ಇದರಿಂದಲೇ ದುರಂತ ಸಂಭವಿಸಿದೆ ಎಂದು  ಹೇಳಲಾಗುತ್ತಿದೆ. ಇಡೀ ಮಾಸ್ತಿಗುಡಿ ದುರಂತವನ್ನೊಮ್ಮೆ ಪರಿಶೀಲಿಸಿದರೆ ಚಿತ್ರರಂಗವನ್ನು ಹತ್ತಿರದಿಂದ ಬಲ್ಲವರಿಗೆ ಈ ಶಂಕೆಮೂಡಬಹುದು. ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಅಷ್ಟೊಂದು ಹಣ ಖರ್ಚು ಮಾಡಿ ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ ಸುರಕ್ಷತೆಗಾಗಿ ಒಂದಷ್ಟು ಹಣವನ್ನೂ ಮೀಸಲಿಡಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ.. ನಿರ್ಮಾಪಕರು ಹಣ ಮೀಸಲಿಟ್ಟಿದ್ದರು.. ಆದರೂ ನಟರ ಪ್ರಾಣ ಉಳಿಯಲಿಲ್ಲವೇಕೆ ಎಂದರೆ ಅದಕ್ಕೆ  ಉತ್ತರ ಮಾತ್ರ ಸಾಹಸ ನಿರ್ದೇಶಕ ರವಿವರ್ಮಾ..

ಪ್ರಸ್ತುತ ಪೊಲೀಸರ ವಶದಲ್ಲಿರುವ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರು ಹೇಳಿರುವಂತೆ ದುರಂತಕ್ಕೆ ಕಾರಣವಾದ ಆ ಸನ್ನಿವೇಶಕ್ಕಾಗಿ ನಿರ್ದೇಶಕ ನಾಗ್ ಶೇಖರ್ ಅವರ ಸಲಹೆ ಮೇರೆಗೆ ಪ್ರಸ್ತುತ ದುಬಾರಿ  ಸಾಹಸ ನಿರ್ದೇಶಕ ರವಿವರ್ಮಾ  ಅವರನ್ನು ದುಬಾರಿ ಸಂಭಾವನೆ ನೀಡಿ ಕರೆಸಲಾಗಿತ್ತಂತೆ. ಅವರ ಸಂಭಾವನೆ ಮಾತ್ರವಲ್ಲದೇ ಆ ಸನ್ನಿವೇಶದ ಚಿತ್ರೀಕರಣದ ಮುಂಜಾಗ್ರತಾ ಕ್ರಮಗಳಿಗಾಗಿ ನಿರ್ಮಾಪಕ ಸುದಂರ್ ಗೌಡ  ಬರೊಬ್ಬರಿ 3 ಲಕ್ಷ ರು.ಹಣ ಖರ್ಚು ಮಾಡಿದ್ದರಂತೆ. ಆದರೆ ಸಾಹಸ ನಿರ್ದೇಶಕ ರವಿವರ್ಮಾ ಆ ಹಣವನ್ನು ಬಳಕೆ ಮಾಡಿಕೊಂಡಿಲ್ಲ. ಹಣ ಪಡೆದು ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಬೆಂಗಳೂರು ಮಿರರ್ ಪತ್ರಿಕೆ ವರದಿ ಮಾಡಿದೆ.

ನಿರ್ಮಾಪಕರು ನೀಡಿದ್ದ ಹಣದಲ್ಲಿ ಶೇ.25ರಷ್ಟು ಹಣವನ್ನಾದರೂ ಖರ್ಚು ಮಾಡಿ ಹಗ್ಗ, ಲೈಫ್ ಜಾಕೆಟ್ ಮತ್ತು ಯಾಂತ್ರಿಕ ಬೋಟ್ ಗಳನ್ನು ತರಿಸಿದ್ದರೆ ಬಹುಶಃ ಈ ದುರಂತವೇ ನಡೆಯುತ್ತಿರಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.  ಆದರೆ ಸಾಹಸ ನಿರ್ದೇಶಕ ರವಿವರ್ಮಾ ಮಾತ್ರ ಆ ಹಣವನ್ನು ತಮ್ಮ ಜೇಬಿಗಿಳಿಸಿದ್ದರು. ಇನ್ನು ಡ್ಯಾಂ ನಲ್ಲಿ ಕೆಟ್ಟು ನಿಂತ ಬೋಟ್ ಯಾವುದು ಎಂದರೆ ಅದು ಸರ್ಕಾರಿ ಬೋಟ್ ಅಂತೆ. ಡ್ಯಾಂನಲ್ಲಿ ಅಧಿಕಾರಿಗಳು ಇರಿಸಿದ್ದ ಬೋಟ್  ಅದು. ಅಪರೂಪಕ್ಕೊಮ್ಮೆ  ಮಾತ್ರ ಆ ಬೋಟ್ ಅನ್ನು ಬಳಕೆ ಮಾಡಲಾಗುತ್ತಿತ್ತಂತೆ. ಸರಿಯಾದ ನಿರ್ವಹಣೆ ಇಲ್ಲದ ಆ ಬೋಟ್ ಅನ್ನೇ ಸಾಹಸ ನಿರ್ದೇಶಕ ರವಿವರ್ಮಾ ಅಪಾಯಕಾರಿ ಚಿತ್ರೀಕರಣಕ್ಕೆ ಬಳಸಿಕೊಂಡಿದ್ದರು. ಇದೇ  ದುರಂತಕ್ಕೆ ಕಾರಣ ಎಂಬುದು ಮತ್ತೊಂದು ಆರೋಪ.

3 ಬೋಟ್ ಬಳಕೆ ಮಾಡುವುದಾಗಿ ಹೇಳಿದ್ದ ರವಿ ವರ್ಮಾ!
ಇನ್ನು ನಿರ್ಮಾಪಕ ಸುಂದರ್ ಗೌಡ ಅವರು ಆರೋಪಿಸಿರುವಂತೆ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ನೀರಿಗೆ ಬೀಳುವ ನಟರ ರಕ್ಷಿಸಲು ಮೂರು ಬೋಟ್ ಗಳನ್ನು ಇಡುವುದಾಗಿ ರವಿವರ್ಮಾ ಹೇಳಿದ್ದರಂತೆ. ಹೆಲಿಕಾಪ್ಟರ್ ನಿಂದ  ನಟರು ನೀರಿಗೆ ಬೀಳುತ್ತಿದ್ದಂತೆಯೇ ಸನ್ನದ್ಧವಾಗಿರುವ ಮೂರು ಬೋಟ್ ಗಳು ಮೂರೂ ನಟರನ್ನು ರಕ್ಷಿಸುತ್ತದೆ ಎಂದು ಹೇಳಿದ್ದರಂತೆ. ಆದರೆ ಚಿತ್ರೀಕರಣದ ಸಂದರ್ಭದಲ್ಲಿ ಬಳಕೆಯಾಗಿದ್ದು ಮಾತ್ರ ಒಂದು ಬೋಟ್. ಅದೂ ಕೂಡ  ಸರ್ಕಾರದ ಕೆಟ್ಟು ನಿಂತಿದ್ದ ಬೋಟ್.

ಆಧುನಿಕ ತಂತ್ರಜ್ಞಾನವಿದ್ದರೂ ಲೈವ್ ಜಂಪ್ ಮಾಡಲು ಪ್ರೇರೇಪಿಸಿದ್ದು ನಟ ದುನಿಯಾ ವಿಜಯ್!
ಇಡೀ ಮಾಸ್ತಿಗುಡಿ ಚಿತ್ರದ ಪ್ರಮುಖ ಘಟ್ಟವಾಗಿದ್ದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಮೊದಲು ಗ್ರೀನ್ ಮ್ಯಾಟ್ (ಕಂಪ್ಯೂಟರ್ ಗ್ರಾಫಿಕ್ಸ್)ಬಳಕೆ ಮಾಡಿ ಚಿತ್ರೀಕರಿಸಲು ನಿರ್ಧರಿಸಲಾಗಿತ್ತಂತೆ. ಆದರೆ ಈ ಹಂತದಲ್ಲಿ ಮಧ್ಯ ಪ್ರವೇಶಿದ್ದ  ನಾಯಕ ನಟ ದುನಿಯಾ ವಿಜಯ್ ಅವರು ಲೈವ್ ಆಗಿಯೇ ಜಂಪ್ ಮಾಡುವ ಕುರಿತು ಸಲಹೆ ನೀಡಿದರಂತೆ. ಅಲ್ಲದೆ ಇದಕ್ಕಾಗಿ ನಟ ಉದಯ್ ಹಾಗೂ ಅನಿಲ್ ಅವರನ್ನು ಒಪ್ಪಿಸುವ ಜವಾಬ್ದಾರಿ ತಮ್ಮದೇ ಎಂದು ಹೇಳಿದ್ದರಂತೆ.  ಅದರಂತೆ ನಟ ಉದಯ್ ಮತ್ತು ಅನಿಲ್ ರನ್ನು ಒಪ್ಪಿಸಿ ಜಂಪ್ ಮಾಡಿಸಿದ್ದರು ಎಂದು ನಿರ್ಮಾಪಕ ಸುಂದರ್ ಗೌಡ ಅವರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಕೆಲವರ ದುಡ್ಡಿನ ಆಸೆ ಮತ್ತು ನಿರ್ಲಕ್ಷ್ಯದಿಂದಾಗಿ ಕನ್ನಡ ಉದಯೋನ್ಮುಖ ನಟರು ಇದೀಗ ಸಾವಿಗೀಡಾಗಿದ್ದು, ಇವರ ಸಾವು ಕನಿಷ್ಠ ಚಿತ್ರರಂಗದ ಈ ಅನಿಷ್ಠ ಪದ್ಧತಿಗೆ ತಿಲಾಂಜಲಿ ಹಾಕುವ ಮೂಲಕ ಮತ್ತೆ ಇಂತಹ  ದುರಂತಗಳು ಸಂಭವಿಸದಿರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com