
ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 6.72 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಮೇಲ್ಸೇತುವೆಯಿಂದ ಬರೊಬ್ಬರಿ 800 ಮರಗಳು ನಾಶವಾಗಲಿವೆ ಎಂಬ ಆರೋಪ ಕೇಳಿಬರುತ್ತಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಮಾರ್ಗದ ಸಂಚಾರಿ ದಟ್ಟಣೆಯನ್ನು ಈ ಉದ್ದೇಶಿತ ಮೇಲ್ಸೇತುವೆ ಕಡಿತಗೊಳಿಸಲಿದೆ ಎಂಬ ವಿಶ್ವಾಸದ ಮೇಲೆ ರಾಜ್ಯ ಸಂಪುಟಸಭೆಯಲ್ಲಿ 6.72 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಆದರೆ ಇದೀಗ ಮೇಲ್ಸೇತುವೆ ನಿರ್ಮಾಣಕ್ಕೆ ಪರಿಸರ ಪ್ರೇಮಿಗಳ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಉಕ್ಕಿನ ಮೇಲ್ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದರಿಂದ ಪರಿಸರಕ್ಕಾಗುವ ಹಾನಿ ಕುರಿತಂತೆ ಯಾವುದೇ ನಿರ್ಧಿಷ್ಟ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ನಿರ್ಮಾಣ ಕಾಮಗಾರಿ ಯೋಜನೆಯನ್ನು ಕೈಬಿಡಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ. ಮೂಲಗಳ ಪ್ರಕಾರ ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗಿನ ಸುಮಾರು 6.72 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಈ ಉಕ್ಕಿನ ಮೇಲ್ಸೇತುವೆಗೆ ಸುಮಾರು 1.800 ಕೋಟಿಗೂ ಅಧಿಕ ಹಣ ಖರ್ಚಾಗಲಿದ್ದು, ಪ್ರಮುಖವಾಗಿ ಸುಮಾರು 800 ಕ್ಕೂ ಹೆಚ್ಚು ಮರಗಳ ಇದರಿಂದ ನಾಶವಾಗಲಿವೆ.
ಮೇಲ್ಸೇತುವೆಯಿಂದಾಗಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಜಯಮಹಲ್ ರಸ್ತೆಯ (ಅರಮನೆ ಮೈದಾನ, ಗಾಲ್ಫ್ ಕೋರ್ಸ್ ಸೇರಿದಂತೆ) ಸುಮಾರು 800 ಮರಗಳು ನಾಶವಾಗುತ್ತವೆ ಎಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಸಂಬಂಧ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಈಗಾಲಲೇ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ನಮ್ಮ ಬೆಂಗಳೂರು ಪ್ರತಿಷ್ಠಾನ ಈ ಅರ್ಜಿಯನ್ನು ಸಲ್ಲಿಸಿತ್ತು. ಅರ್ಜಿ ಸಂಬಂಧ ನ್ಯಾಯಾಲಯ ಕೂಡ ರಾಜ್ಯ ಸರ್ಕಾರ ಹಾಗೂ ಬಿಡಿಎಗೆ ನೋಟಿಸ್ ಜಾರಿ ಮಾಡಿದಲ್ಲದೆ ಮೇಲ್ಸೇತುವೆ ನಿರ್ಮಾಣಕ್ಕೂ ಮೊದಲು ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆಯಬೇಕು ಎಂದು ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್. ಬಿ.ಬೂದಿಹಾಳ ಅವರಿದ್ದ ವಿಭಾಗಿಯ ನ್ಯಾಯಪೀಠ ಆದೇಶ ನೀಡಿತ್ತು. ಆದರೆ, ಬಿಡಿಎ ಈ ಯಾವುದೇ ಸಲಹೆ ಸೂಚನೆಗಳನ್ನು ಪಡೆಯದೇ ಉಕ್ಕಿನ ಮೇಲ್ಸೇತುವೆಯನ್ನು ನಿರ್ಮಿಸಲು ಮುಂದಾಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಜಾಗೃತಿ ಅಭಿಯಾನವೇ ನಡೆಯುತ್ತಿದ್ದು, ನಟ ಪ್ರಕಾಶ್ ರೈ ಸೇರಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನದ ಸದಸ್ಯರು ಸಹಿ ಸಂಗ್ರಹ ಮಾಡುವ ಮೂಲಕ ಯೋಜನೆಗೆ ವಿರೋಧಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಜನರ ಸಹಿ ಸಂಗ್ರಹಿಸಲಾಗಿದೆ. ಬಳಿಕ ಇದನ್ನು ಸಿಎಂ ಸಿದ್ದರಾಮಯ್ಯನವರಿಗೆ ಕಳುಹಿಸಿ ಕಾಮಗಾರಿ ಕೈಬಿಡುವಂತೆ ಮನವಿ ಮಾಡಲು ಹೋರಾಟಗಾರರು ನಿರ್ಧರಿಸಿದ್ದಾರೆ. ಇದೇ ಅಕ್ಟೋಬರ್ 16 ರಂದು ಬಸವೇಶ್ವರ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಯಲಿದೆ.
Advertisement