ಪ್ಯಾರಾ ಅಥ್ಲೀಟ್ ಕೃತಕ ಕಾಲು ತೆಗೆಸಿ ಅಮಾನವೀಯವಾಗಿ ನಡೆದುಕೊಂಡ ಭದ್ರತಾ ಸಿಬ್ಬಂದಿ

ಪ್ಯಾರಾ ಅಥ್ಲೀಟ್ ಆದಿತ್ಯ ಮೆಹ್ತಾ ಅವರೊಂದಿಗೆ ರಾಜಧಾನಿಯಲ್ಲಿ ಭದ್ರತಾ ಸಿಬ್ಬಂದಿಗಳು ಮತ್ತೆ ಅಮಾನವೀಯವಾಗಿ ನಡೆದುಕೊಂಡಿದ್ದು, ಕೃತಕ ಕಾಲು ತೆಗೆಸಿ ತಪಾಸಣೆ ನಡೆಸಿರುವ ಘಟನೆ ಗುರುವಾರ...
ಪ್ಯಾರಾ ಅಥ್ಲೀಟ್ ಆದಿತ್ಯ ಮೆಹ್ತಾ
ಪ್ಯಾರಾ ಅಥ್ಲೀಟ್ ಆದಿತ್ಯ ಮೆಹ್ತಾ

ಬೆಂಗಳೂರು: ಪ್ಯಾರಾ ಅಥ್ಲೀಟ್ ಆದಿತ್ಯ ಮೆಹ್ತಾ ಅವರೊಂದಿಗೆ ರಾಜಧಾನಿಯಲ್ಲಿ ಭದ್ರತಾ ಸಿಬ್ಬಂದಿಗಳು ಮತ್ತೆ ಅಮಾನವೀಯವಾಗಿ ನಡೆದುಕೊಂಡಿದ್ದು, ಕೃತಕ ಕಾಲು ತೆಗೆಸಿ ತಪಾಸಣೆ ನಡೆಸಿರುವ ಘಟನೆ ಗುರುವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್ಎಫ್) ಸಿಬ್ಬಂದಿ ಭದ್ರತಾ ತಪಾಸಣೆ ವೇಳೆ ಆದಿತ್ಯಾ ಮೆಹ್ತಾ ಅವರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಹೈದರಾಬಾದ್ ಮೂಲದ ಆದಿತ್ಯ ಮೆಹ್ತಾ ಅವರೊಂದಿಗೆ ಇದೇ ರೀತಿಯಾಗಿ ಕೆಲ ದಿನಗಳ ಹಿಂದೆ ಕೂಡ ಭದ್ರತಾ ಸಿಬ್ಬಂದಿಗಳು ಅಮಾನವೀಯವಾಗಿ ನಡೆದುಕೊಂಡಿದ್ದರು. ಅಂದೂ ಕೂಡ ಕೃತಕ ಕಾಲನ್ನು ತೆಗೆಸಿ ತಪಾಸಣೆ ನಡೆಸಿದ್ದರು. ಇದೀಗ ಮತ್ತೆ ಭದ್ರತಾ ಸಿಬ್ಬಂದಿಗಳು ಅದೇ ರೀತಿಯಾಗಿ ನಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಈ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಆದಿತ್ಯಾ ಮೆಹ್ತಾ ಅವರು, ತಪಾಸಣೆ ವೇಳೆ ಭದ್ರತಾ ಸಿಬ್ಬಂದಿಗಳ ಬಳಿ ಸಾಕಷ್ಟು ಮನವಿ ಮಾಡಿಕೊಂಡೆ. ಆದರೂ, ಅವರು ಕೃತಕ ಕಾಲನ್ನು ತೆಗೆಯುವಂತೆ ಬಲವಂತ ಮಾಡಿದರು. ನನ್ನ ಮಾತನ್ನು ಕೇಳಲೇ ಇಲ್ಲ. ಅಲ್ಲದೆ, ಬಾಡಿ ಸ್ಕ್ಯಾನರ್ ಗೆ ಭಾರತ ಅವಕಾಶ ನೀಡಿಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದರು.

ಈ ರೀತಿಯಾಗಿ ಯಾರಾದರೂ ಮಾತನಾಡುತ್ತಾರೆಯೇ? ಅಂಗ ಕಳೆದುಕೊಂಡ ವ್ಯಕ್ತಿಯೊಬ್ಬನೊಂದಿಗೆ ಮಾತನಾಡುವ ರೀತಿಯೇ ಇದು? ಅಂಗ ಕಳೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ನಾನು ಕೃತಕ ಕಾಲನ್ನು ಹಾಕಿಕೊಂಡಿರುವುದು. ಪ್ರತೀಯೊಂದು ಹಂತದಲ್ಲಿಯೂ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದರೆ ವ್ಯಕ್ತಿ ನಿಜಕ್ಕೂ ತನ್ನಲ್ಲಿರುವ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಮಾನಸಿಕವಾಗಿ ಸ್ಥೈರ್ಯವನ್ನು ಕಳೆದುಕೊಳ್ಳುತ್ತಾನೆ.

ಒಮ್ಮೆ ಕೃತಕ ಕಾಲನ್ನು ತೆಗೆದರೆ ಅದನ್ನು ಹಾಕಿಕೊಳ್ಳಲು ಕನಿಷ್ಟ 50 ನಿಮಿಷಗಳ ಕಾಲ ಬೇಕಾಗುತ್ತದೆ. ಆದರೆ, ಭದ್ರತಾ ಸಿಬ್ಬಂದಿಗಳು 15 ನಿಮಿಷಗಳೊಳಗಾಗಿ ಕೃತಕ ಕಾಲನ್ನು ಹಾಕಿಕೊಳ್ಳುವಂತೆ ತಿಳಿಸಿದರು. ಇದೀಗ ಕಾಲಿಗೆ ಆಗಿರುವ ಗಾಯ ಮತ್ತಷ್ಟು ಉಲ್ಬಣಗೊಳ್ಳುವಂತೆ ಆಗಿದೆ. ಇನ್ನು ಮೂರು ದಿನಗಳ ಕಾಲ ನನಗೆ ನಡೆಯಲು ಸಾಧ್ಯವಾಗುವುದಿಲ್ಲ.

ಭದ್ರತಾ ಸಿಬ್ಬಂದಿಗಳ ಈ ವರ್ತನೆ ಕುರಿತಂತೆ ಡಿಜಿ ಸಿಐಎಸ್ಎಫ್, ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಪ್ರಧಾನಮಂತ್ರಿಯವರ ಕಚೇರಿಗೆ ದೂರನ್ನು ನೀಡಿದ್ದೇನೆ. ಆದರೆ, ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ. ಪ್ರಧಾನಮಂತ್ರಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿದೆ. ಸಂಬಂಧಪಟ್ಟ ಸಚಿವಾಲಯಕ್ಕೆ ರವಾನೆ ಮಾಡಲಾಗುವುದು ಎಂದು ಹೇಳಲಾಗಿದೆ. ಆದರೆ, ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಈಗಲೂ ನಾನು ಕಾಯುತ್ತಲೇ ಇದ್ದೇನೆ. ಭದ್ರತಾ ಸಿಬ್ಬಂದಿಗಳ ಈ ವರ್ತನೆಯಿಂದ ನನಗೆ ಅವಮಾನವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಆದಿತ್ಯಾ ಮೆಹ್ದಾ ಅವರು ಮೂಲತಃ ಹೈದರಾಬಾದ್ ನವರಾಗಿದ್ದು, ಕೆಲ ವರ್ಷಗಳ ಹಿಂದಷ್ಟೇ ನಡೆದಿದ್ದ ಅಪಘಾತವೊಂದರಲ್ಲಿ ಬಲಗಾಲಿನ ಮಂಡಿಯ ಕೆಳಭಾಗವನ್ನು ಕಳೆದುಕೊಂಡಿದ್ದರು. ಆದಿತ್ಯಾ ಮೆಹ್ತಾ ಅವರು ಏಷ್ಯನ್ ಸೈಕ್ಲಿಂಗ್ ಚಾಂಪಿಯನ್ ಶಿಷ್ ನಲ್ಲಿ ಎರಡು ಬೆಳ್ಳಿ ಗೆದ್ದಿದ್ದಾರೆ. ಜೊತೆಗೆ ಕೃತಕ ಕಾಲಿನ ಸಹಾಯದಿಂದಲೇ ಅತ್ಯಂತ ವೇಗವಾಗಿ ಸೈಕಲ್ ತುಳಿದು 100 ಕಿ.ಮೀ ಗುರಿ ಮುಟ್ಟಿ ಲಿಮ್ಕಾ ದಾಖಲೆಯನ್ನು ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com