ವಿವಾದಾತ್ಮಕ ಉಕ್ಕಿನ ಮೇಲ್ಸೇತುವೆ ವಿರೋಧಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಬೃಹತ್ ಮಾನವ ಸರಪಳಿ ನಿರ್ಮಿಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.
ಉಕ್ಕಿನ ಮೇಲ್ಸೇತುವೆ ನಿರ್ಮಾಣ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ (ಚಿತ್ರ ಕೃಪೆ: ಫೇಸ್ ಬುಕ್)
ಉಕ್ಕಿನ ಮೇಲ್ಸೇತುವೆ ನಿರ್ಮಾಣ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ (ಚಿತ್ರ ಕೃಪೆ: ಫೇಸ್ ಬುಕ್)

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 6.72 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಭಾರಿ   ವಿರೋಧ ವ್ಯಕ್ತವಾಗುತ್ತಿದ್ದು, ನಮ್ಮ ಬೆಂಗಳೂರು ಪ್ರತಿಷ್ಠಾನದ ವತಿಯಿಂದ ಬೃಹತ್ ಮಾನವ ಸರಪಳಿ ನಿರ್ಮಿಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ, ನಟಿ ಅರುಂಧತಿ ನಾಗ್‌ ,ನಿರ್ದೇಶಕ ಪವನ್‌ ಒಡೆಯರ್‌, ಬೆಂಗಳೂರಿನ ಖ್ಯಾತನಾಮರು ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಬಸವೇಶ್ವರ  ವೃತ್ತದಿಂದ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವಿವಾದಾತ್ಮಕ ಯೋಜನೆಯಿಂದಾಗಿ ಬೆಂಗಳೂರಿನ ಸಾಂಪ್ರದಾಯಿಕ ಆಸ್ತಿ-ಪಾಸ್ತಿ ಹಾಗೂ ಸೌಂದರ್ಯಕ್ಕೆ  ಧಕ್ಕೆಯಾಗುತ್ತದೆ ಎಂದು ಕಾರ್ಯಕರ್ತರು ಆರೋಪಿಸಿದ್ದು, ಕೂಡಲೇ ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿವಾದಾತ್ಮಕ ಯೋಜನೆಯನ್ನು ವಿರೋಧಿಸಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಹಿ ಸಂಗ್ರಹ ಮಾಡಲಾಗುತ್ತಿದ್ದು, ನಟ ಪ್ರಕಾಶ್ ರೈ ಸೇರಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನದ  ಸದಸ್ಯರು ಸಹಿ ಸಂಗ್ರಹ  ಮಾಡುವ ಮೂಲಕ ಯೋಜನೆಗೆ ವಿರೋಧಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಜನರ ಸಹಿ ಸಂಗ್ರಹಿಸಲಾಗಿದೆ. ಬಳಿಕ ಇದನ್ನು ಸಿಎಂ ಸಿದ್ದರಾಮಯ್ಯನವರಿಗೆ  ಕಳುಹಿಸಿ ಕಾಮಗಾರಿ  ಕೈಬಿಡುವಂತೆ ಮನವಿ ಮಾಡಲು ಹೋರಾಟಗಾರರು ನಿರ್ಧರಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಮಾರ್ಗದ ಸಂಚಾರಿ ದಟ್ಟಣೆಯನ್ನು ಈ ಉದ್ದೇಶಿತ ಮೇಲ್ಸೇತುವೆ ಕಡಿತಗೊಳಿಸಲಿದೆ ಎಂಬ ವಿಶ್ವಾಸದ  ಮೇಲೆ ರಾಜ್ಯ ಸಂಪುಟಸಭೆಯಲ್ಲಿ 6.72 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಆದರೆ ಇದೀಗ ಮೇಲ್ಸೇತುವೆ ನಿರ್ಮಾಣಕ್ಕೆ ಪರಿಸರ ಪ್ರೇಮಿಗಳ ಭಾರಿ ವಿರೋಧ   ವ್ಯಕ್ತಪಡಿಸುತ್ತಿದ್ದಾರೆ.

ಉಕ್ಕಿನ ಮೇಲ್ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದರಿಂದ ಪರಿಸರಕ್ಕಾಗುವ ಹಾನಿ ಕುರಿತಂತೆ ಯಾವುದೇ ನಿರ್ಧಿಷ್ಟ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ   ನಿರ್ಮಾಣ ಕಾಮಗಾರಿ ಯೋಜನೆಯನ್ನು ಕೈಬಿಡಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ. ಮೂಲಗಳ ಪ್ರಕಾರ ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗಿನ ಸುಮಾರು   6.72 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಈ ಉಕ್ಕಿನ ಮೇಲ್ಸೇತುವೆಗೆ ಸುಮಾರು 1.800 ಕೋಟಿಗೂ ಅಧಿಕ ಹಣ ಖರ್ಚಾಗಲಿದ್ದು, ಪ್ರಮುಖವಾಗಿ ಸುಮಾರು 800 ಕ್ಕೂ ಹೆಚ್ಚು ಮರಗಳ   ಇದರಿಂದ ನಾಶವಾಗಲಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com