ಕಾಂಗ್ರೆಸ್ ನ ಆತ್ಮಹತ್ಯೆ; ಮೊದಲು ಕೇರಳ, ನಂತರ ಕರ್ನಾಟಕ!

ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣೆ ಹತ್ತಿರದಲ್ಲೇ ಇದ್ದು ಕಾಂಗ್ರೆಸ್ ಹಾಗೂ ಅದರ ಹೈಕಮಾಂಡ್ ಗೆ ಇರುವ ಏಕೈಕ 'ಎಟಿಎಂ' ಎಂದರೆ ಅದು ಕರ್ನಾಟಕ ಮಾತ್ರ....
ಕಾಂಗ್ರೆಸ್ ನ ಆತ್ಮಹತ್ಯೆ; ಮೊದಲು ಕೇರಳ, ನಂತರ ಕರ್ನಾಟಕ!

ಕಾಂಗ್ರೆಸ್ ತನ್ನ ಅಂತ್ಯವನ್ನು ತಾನೇ ಬಯಸುತ್ತಿರುವುದನ್ನು ನೋಡುವುದು ಬೆರಗುಗೊಳಿಸುವ ವಿದ್ಯಮಾನ. ಕಾಂಗ್ರೆಸ್ ಪಕ್ಷವನ್ನು ಕ್ಯಾನ್ಸರ್ ಒಳಗಿಂದಲೇ ನಾಶ ಮಾಡುತ್ತಿದೆ. ಆದರೆ ಅದನ್ನು ಗುರುತಿಸಿವ ಸಣ್ಣ ಪ್ರಯತ್ನದ ಸುಳಿವು ಕಾಂಗ್ರೆಸ್ ನ ಹಿರಿಯ ನಾಯಕರು ಅಥವಾ ಇತ್ತೀಚಿಗೆ ಮರ್ಯಾದೆ ಕಳೆದುಕೊಳ್ಳುತ್ತಿರುವ ಪಕ್ಷದ ನಿಯಂತ್ರಕ ಕುಟುಂಬದಿಂದ ಇಲ್ಲದಂತಾಗಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ನಿಂದ ಎಲೆಕ್ಟ್ರಿಕ್ ಕಂಬ ಚುನಾವಣೆಗೆ ನಿಂತರೂ ಗೆಲ್ಲುತ್ತದೆ ಎಂಬ ಮಾತಿತ್ತು. ಆದರೆ ಈಗ ಅದೇ ಪಕ್ಷ ಕೇವಲ 8 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಕರ್ನಾಟಕವೊಂದನ್ನು ಹೊರತುಪಡಿಸಿ ಉಳಿದೆಲ್ಲವೂ ಸಣ್ಣ ರಾಜ್ಯಗಳಾಗಿದ್ದು ಕಾಂಗ್ರೆಸ್ ಪಕ್ಷ ರಾಜ್ಯದ ಮುಂದಿನ ಚುನಾವಣೆಯಲ್ಲಿ ತನ್ನ ಸೋಲಿಗೆ ಅಗತ್ಯವಿರುವ ಎಲ್ಲವನ್ನೂ ತಯಾರಿ ಮಾಡಿಕೊಳ್ಳುತ್ತಿದೆ.

ಕೇರಳದಲ್ಲಿ ಭ್ರಷ್ಟ ಸಚಿವರನ್ನು ಸಂಪುಟದಿಂದ ಕಿತ್ತೊಗೆಯಲು ಕಾಂಗ್ರೆಸ್ ಹೈ ಕಮಾಂಡ್ ನೀಡಿದ್ದ ಸೂಚನೆಯನ್ನು ಸ್ಪಷ್ಟಾವಾಗಿ ಧಿಕ್ಕರಿಸಿದ್ದ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಕಾಂಗ್ರೆಸ್ ನ ಸೋ ಕಾಲ್ಡ್ ಹೈಕಮಾಂಡ್ ತನ್ನದೇ ಸರ್ಕಾರ, ಮುಖ್ಯಮಂತ್ರಿಗಳ ಮೇಲಿನ ಹಿಡಿತವನ್ನು(ಪಾರಮ್ಯವನ್ನು) ಕಳೆದುಕೊಂಡಿದೆ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದ್ದರು. ಮತ್ತಷ್ಟು ಒತ್ತಡ ಹೇರಿದ್ದಕ್ಕೆ ಚುನಾವಣಾ ಪ್ರಚಾರವನ್ನೆ ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದರು. ಕೊನೆಗೆ ಚಾಂಡಿ ಬೆದರಿಕೆಗೆ ಕಾಂಗ್ರೆಸ್ ಹೈಮಾಂಡ್ ಗೆ ಬಗ್ಗಲೇಬೇಕಾಯಿತು. ಇವೆಲ್ಲದರ ಪರಿಣಾಮವಾಗಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಉಮ್ಮನ್ ಚಾಂಡಿ ಇತಿಹಾಸ ಕಂಡು ಕೇಳರಿಯದಂತಹ ಹೀನಾಯ ಸೋಲಿನತ್ತ ಮುನ್ನಡೆಸಿದರು. ಪ್ರಸ್ತುತ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಮ್ಯುನಿಷ್ಟ್ ನೇತೃತ್ವದ ಸರ್ಕಾರ ತಪ್ಪುಗಳನ್ನು ಮಾಡದೇ ಇದ್ದರೆ ಉಮ್ಮನ್ ಚಾಂಡಿ ಹಾಗೂ ಅವರ ಸಮಕಾಲೀನ ನಾಯಕರನ್ನು ಹೊರತುಪಡಿಸಿ ಯುವ ನಾಯಕರು ಕಾಂಗ್ರೆಸ್ ನ್ನು ಮುನ್ನಡೆಸುವವರೆಗೂ ಕೇರಳದಲ್ಲಿ ಪಕ್ಷಕ್ಕೆ ಸೋಲು ನಿರಂತರವಾದದ್ದು.

ಕರ್ನಾಟಕದ ಕಾಂಗ್ರೆಸ್ ನ ನಡೆ ಕೇರಳದ ಕಾಂಗ್ರೆಸ್ ಆತ್ಮಹತ್ಯಾ ನಡೆಯಷ್ಟೇ ಗಟ್ಟಿಯಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನತೆ ಹೊಸದಾಗಿ ತಿರುಗಿಬಿದ್ದಿರುವುದು ದುರಾಸೆಯ ರಾಜಕಾರಣಿಗಳ ಸ್ಟೀಲ್ ಫ್ಲೈ ಓವರ್ ಯೋಜನೆಯ ಕಾರಣದಿಂದ. ಪ್ರಾರಂಭದ ಯೋಜನೆಯ ಪ್ರಕಾರ ಫ್ಲೈ ಓವರ್ ಅತಿ ಹೆಚ್ಚು ಟ್ರಾಫಿಕ್ ಇರುವ ಹೆಬ್ಬಾಳದ ಇಂಟರ್‌ಸೆಕ್ಷನ್ (ಅಡ್ಡರಸ್ತೆ ಛೇದಕ) ಗೆ ಕೊನೆಗೊಳ್ಳಬೇಕಿತ್ತು. ಆದರೆ ದೊಡ್ಡ ಟ್ರಾಫಿಕ್ ಸಮಸ್ಯೆ ಅಥವಾ ವಾಹನಗಳ ಸಂಚಾರಕ್ಕೆ ಅಡಚಣೆ ಇರುವುದು ಹೆಬ್ಬಾಳ ಜಂಕ್ಷನ್ ನಂತರ ಎಂಬುದನ್ನು ಗಮನಿಸಿದ ಬಳಿಕ  ನಿರ್ಮಾಣವಾಗಬೇಕಿದ್ದ ಫ್ಲೈ ಓವರ್ ನ  ನೀಲನಕ್ಷೆಯನ್ನು ತರಾತುರಿಯಲ್ಲಿ ವಿಸ್ತರಿಸಲಾಗಿರುವುದು ಸರ್ಕಾರದ ಈಗಿನ ಸ್ಥಿತಿಗೆ ಹಾಗೂ ಬುದ್ಧಿ ಉಪಯೋಗಿಸದೆ ಇರುವ ಮನಸ್ಥಿತಿಗೆ ಉತ್ತಮ ಉದಾಹರಣೆ.

ಸ್ಟೀಲ್ ಫ್ಲೈ ಓವರ್  ನಿರ್ಮಾಣದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳಿಂದಾಗಿಯೇ ಸ್ಟೀಲ್ ಫ್ಲೈ ಓವರ್ ಗೆ ವಿರೋಧ ವ್ಯಕ್ತವಾಗುತ್ತಿರುವುದು ಸ್ಪಷ್ಟವಾಗಿದೆ. ಬೆಂಗಳೂರಿನ ಕೇಂದ್ರ ಭಾಗವಾಗಿರುವ ಚಾಲುಕ್ಯ ವೃತ್ತದಲ್ಲಿ ಅಂಡರ್ ಪಾಸ್ ಹಾಗೂ ಅಡ್ಡ ಹಾದುಹೋಗುವ ಸ್ಟಿಲ್ ಬ್ರಿಡ್ಜ್ ಗಳಿಂದ ತುಂಬಿರುತ್ತೆ. ಇದಕ್ಕಾಗಿ ನೂರಾರು ಮರಗಳನ್ನು ಕತ್ತರಿಸಿದರೆ, ಗಾಲ್ಫ್ ಕ್ಲಬ್ ಬಳಿ ಇರುವ ಪಾರಂಪರಿಕ ಕಟ್ಟಡಗಳು ನೆಲಕ್ಕುರುಳಲಿವೆ. ಎಲ್ಲಕ್ಕಿಂತ ಮಿಗಿಲಾಗಿ, ಸ್ಟಿಲ್ ಫ್ಲೈ ಓವರ್ ನ ವಿವರಗಳ ಬಗ್ಗೆ ಸರ್ಕಾರ ಗುಟ್ಟು ಮಾಡುತ್ತಿದೆ. ಆರ್ ಟಿಐ ನ ಅಡಿಯಲ್ಲಿ ಸರ್ಕಾರ ಸ್ಟಿಲ್ ಫ್ಲೈ ಓವರ್ ಬಗ್ಗೆ ಮಾಹಿತಿ ನೀಡಲು ನಿರಾಕರಿಸುತ್ತಿದೆ. ಈ ನಡುವೆ ಬೆಂಗಳೂರನ್ನು ಟೋಲ್ ಹಣ ನೀಡಿ ವಿಮಾನ ನಿಲ್ದಾಣ ತಲುಪುವ ಏಕೈಕ ನಗರವನ್ನಾಗಿಸಲಾಗುತ್ತಿದೆ. ಸ್ಟಿಲ್ ಫ್ಲೈ ಓವರ್ ನ ಒಟ್ಟಾರೆ ಯೋಜನೆ, ಆರ್ಥಿಕವಾಗಿ, ರಾಜಕೀಯವಾಗಿ, ನೈತಿಕವಾಗಿ ಕೆಟ್ಟದಾಗಿದ್ದು, ಸರ್ಕಾರ ಸಂವೇದನಾಶೀಲವಾಗಿ ನಡೆದುಕೊಳ್ಳಬೇಕೆಂದರೆ ಇಡೀ ಯೋಜನೆಯನ್ನು ರದ್ದುಗೊಳಿಸುವುದು ಸೂಕ್ತ.    
ಇನ್ನು ಸ್ಟಿಲ್ ಫ್ಲೈ ಓವರ್ ನ್ನು ವಿರೋಧಿಸಿ ಬೆಂಗಳೂರಿಗರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ್ದೂ ಆಗಿದೆ. ಜನರನ್ನು ಪ್ರತಿನಿಧಿಸುವ ಯಾವುದೇ ಸರ್ಕಾರ ಜನರ ಅಭಿಪ್ರಾಯಗಳನ್ನು ಆಲಿಸುವ ಸೌಜನ್ಯವನ್ನು ತೋರುತ್ತಿತ್ತು. ಆದರೆ ಪ್ರತಿಭಟನೆಯ ಮಾರನೆಯ ದಿನ "ಸ್ಟಿಲ್ ಫ್ಲೈ ಓವರ್ ನ್ನು ಈಗಾಗಲೇ ಸಿದ್ಧ ಪಡಿಸಿರುವ ಯೋಜನೆಯ ಪ್ರಕಾರವೇ ನಿರ್ಮಿಸಲು ಬದ್ಧ" ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ತಮ್ಮ ಹೈ ಕಮಾಂಡ್ ನ ಸೊಕ್ಕನ್ನೇ ಪ್ರತಿಬಿಂಬಿಸಿದ್ದಾರೆ.

ಏಕಿಷ್ಟು ಮೊಂಡುತನ? ಯೋಜನೆಯ ಬಗ್ಗೆ ಎರಡು ವಿವರಣೆಗಳನ್ನು ನೋಡಬಹುದು. ಮೊದಲನೆಯದು, ಕರ್ನಾಟಕದ ಕಾಂಗ್ರೆಸ್ ನಾಯಕರು ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶ ಹೊಂದಿಲ್ಲ. ಆದ್ದರಿಂದಲೇ ಅಧಿಕಾರದಲ್ಲಿರುವಾಗಲೇ ತಮ್ಮ 'ಉದ್ದೇಶ'ಗಳನ್ನು ಈಡೇರಿಸಿಕೊಳ್ಳುವ ಆತುರದಲ್ಲಿದ್ದಾರೆ. ಎರಡನೆಯದಾಗಿ ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣೆ ಹತ್ತಿರದಲ್ಲೇ ಇದ್ದು ಕಾಂಗ್ರೆಸ್ ಹಾಗೂ ಅದರ ಹೈಕಮಾಂಡ್ ಗೆ ಇರುವ  ಏಕೈಕ 'ಎಟಿಎಂ' ಎಂದರೆ ಅದು ಕರ್ನಾಟಕ ಮಾತ್ರ. ಎರಡೂ ವಿವರಣೆಗಳು ಇಂದಿನ ರಾಜಕೀಯ ವರ್ಗವನ್ನು ಮನದಟ್ಟು ಮಾಡಿಕೊಡುತ್ತವೆ. ಅಲ್ಲದೆ ಹೈಕಮಾಂಡ್ ಇತ್ತೀಚಿನ ದಿನಗಳಲ್ಲಿ ಹೆಸರಿಗೆ ತಕ್ಕಂತೆ 'ಹೈ' ಕಮಾಂಡ್ ಆಗಿ ಉಳಿದಿಲ್ಲ. ಪ್ರತಿ ಹಂತದಲ್ಲೂ ಪಕ್ಷದ ಮೇಲಿನ ವಂಶಪಾರಂಪರ್ಯದ ಹಿಡಿತ ಅನುಪಯುಕ್ತವಾಗಿರುವುದು ಸಾಬೀತಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಗೆಲ್ಲಲು ಯಾವುದೇ ಅವಕಾಶಗಳಿಲ್ಲ ಆದರೂ ಸೋನಿಯಾ ಗಾಂಧಿ,  ರಾಹುಲ್ ಗಾಂಧಿಗೆ ಆಪ್ತರಾಗಿದ್ದ ರೀಟಾ ಬಹುಗುಣ ಜೋಷಿ ಪಕ್ಷ ತೊರೆದಿದ್ದು ಪಕ್ಷಕ್ಕೆ ಬಹುದೊಡ್ಡ ಹೊಡೆತ ನೀಡಿದಂತಾಗಿದೆ. ಸದ್ಯಕ್ಕೆ ರಾಜಸ್ಥಾನ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಇರುವ ಏಕೈಕ ಆಶಾಕಿರಣ ರಾಜ್ಯ. ಏಕೆಂದರೆ ಅಲ್ಲಿನ ಸ್ಥಳೀಯ ನಾಯಕತ್ವ ಇರುವುದು ದೂರದೃಷ್ಟಿ ಹಾಗೂ ಸಾಮರ್ಥ್ಯವನ್ನು ಹೊಂದಿರುವ ಯುವ ನಾಯಕ ಸಚಿನ್ ಪೈಲಟ್ ಕೈಯಲ್ಲಿ. ರಾಜಸ್ಥಾನದ ಹಿರಿಯ ನಾಯಕರು ಈಗಾಗಲೇ ಮೂಲೆಗುಂಪಾಗಿದ್ದಾರೆ. ರಾಹುಲ್ ಗಾಂಧಿ ಅವರ ಆಪ್ತರಾಗಿರುವ ಸಿಪಿ ಜೋಷಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಯೋಜಿಸಿದ್ದ ಔತಣ ಕೂಟಕ್ಕೆ ಗೈರುಹಾಜರಾಗಿದ್ದರೆ ಅ.6 ರಂದು ನಡೆದ ರಾಹುಲ್ ಗಾಂಧಿ ರ್ಯಾಲಿಗೆ ಇಬ್ಬರೂ ನಾಯಕರು ಗೈರಾಗಿದ್ದರು. ರಾಜಸ್ಥಾನದ ಹಿರಿಯ ಕಾಂಗ್ರೆಸ್ ನಾಯಕರ ಹಾದಿಯಲ್ಲೇ ಕಾಂಗ್ರೆಸ್ ನ ಎಲ್ಲಾ ಹಿರಿಯರು ನಡೆದರೆ ಯುವ, ಸಮರ್ಥ ನಾಯಕರು ಪಕ್ಷದ ನಿಯಂತ್ರಣ ಅಧಿಕಾರವನ್ನು ಪಡೆಯುತ್ತಾರೆ. ಆ ಮೂಲಕ ಕಾಂಗ್ರೆಸ್ ಪಕ್ಷ ಪುನರ್ಜನ್ಮ ಪಡೆಯಬಹುದು. ಆದರೆ ಹಾಗಾಗುವುದಿಲ್ಲ. ಏಕೆ ಎನ್ನುತ್ತೀರಾ? ಕುರುಡಾದ, ಕದಲಿಸಲಾಗದ ದೋಷಾತೀತ ಕುಟುಂಬವನ್ನು ಕೇಳಿ.

-ಟಿಜೆಎಸ್ ಜಾರ್ಜ್

(ಈ ಲೇಖನವನ್ನು ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com