
ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣವಾಗಿ ಕನ್ನಡ ಮಾಧ್ಯಮ ಜಾರಿಯಾಗಬೇಕು ಎಂದರೆ ಅದು ಕೇವಲ ಸಂವಿಧಾನ ತಿದ್ದುಪಡಿಯಿಂದ ಮಾತ್ರವೇ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
61 ಕನ್ನಡ ರಾಜ್ಯೋತ್ಸ ದಿನಾಚರಣೆ ನಿಮಿತ್ತ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗಿ ಜಾರಿಯಾಗಲು ಸಂವಿಧಾನ ತಿದ್ದುಪಡಿಯಿಂದ ಮಾತ್ರವೇ ಸಾಧ್ಯ ಎಂದು ಹೇಳಿದರು.
"ಕನ್ನಡ ಮಾಧ್ಯಮ ಜಾರಿಗೆ ರಾಜ್ಯ ಸರ್ಕಾರ ಸಾಕಷ್ಚು ಪ್ರಯತ್ನ ಪಟ್ಟಿದ್ದು, ಈ ಹಿಂದೆ ಸಾಕಷ್ಟು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕನ್ನಡ ಮಾಧ್ಯಮ ಜಾರಿ ಕುರಿತು ಮನವಿ ಮಾಡಿದ್ದೆ. ಮಾತೃಭಾಷೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದೆ. ಅಂತೆಯೇ ಕರ್ನಾಟಕದಲ್ಲಿ ಶಿಕ್ಷಣ ಮಾಧ್ಯಮ ನೀತಿ ಘೋಷಣೆ ಮಾಡಿದ್ದೇವೆ. ಆಯಾ ರಾಜ್ಯಗಳಲ್ಲಿ ಮಾತೃಭಾಷೆಯನ್ನೇ ಪ್ರಾಥಮಿಕ ಶಿಕ್ಷಣವನ್ನಾಗಿ ಜಾರಿಗೊಳಿಸಬೇಕು ಎಂದು ಕೇಂದ್ರದ ಬಳಿ ಮನವಿ ಮಾಡಿದ್ದೆ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಈ ವಾದಕ್ಕೆ ಮನ್ನಣೆ ಸಿಗಲಿಲ್ಲ. ಸರ್ವೋಚ್ಛ ನ್ಯಾಯಾಲಯದಲ್ಲಿ ನಮಗೆ ತೀವ್ರ ಹಿನ್ನಡೆಯಾಗಿದೆ.
ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸುವಂತಿಲ್ಲ. ಹೀಗಾಗಿ ಸಂವಿಧಾನಕ್ಕೆ ತಿದ್ದುಪಡಿಯೊಂದೇ ಮಾಧ್ಯಮ ಶಿಕ್ಷಣ ಜಾರಿಗಿರುವ ಒಂದೇ ಒಂದು ದಾರಿಯಾಗಿದೆ. ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ಮಾಡಿದರೆ ಮಾಧ್ಯಮ ಶಿಕ್ಷಣ ಜಾರಿ ಮಾಡಬಹುದು ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತೊಮ್ಮೆ ಪ್ರಧಾನಿಗೆ ಮನವಿ
ಇದೇ ವೇಳೆ ಮಾಧ್ಯಮ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಆಯಾ ರಾಜ್ಯಗಳಲ್ಲಿ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಜಾರಿಗೊಳಿಸುವಂತೆ ಮನವಿ ಮಾಡುತ್ತೇನೆ. ಅಂತೆಯೇ ಮಾತೃಭಾಷೆ ಶಿಕ್ಷಣಕ್ಕಾಗಿ ಸಂವಿಧಾನ ತಿದ್ದುಪಡಿ ತರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ನ್ಯಾಯ ಕೊಡಿಸಿ: ಭಾಷಣ ಮಧ್ಯೆ ಯುವಕ ಕೂಗಾಟ
ಮತ್ತೊಂದೆಡೆ ಅತ್ತ ರಾಜ್ಯದ ಜನತೆಯನ್ನುದ್ದೇಶಿಸಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪರಶುರಾಮ ಎಂಬ ಯುವಕ ತನಗೆ ನ್ಯಾಯ ಕೊಡಿಸುವಂತೆ ಕೂಗಿದ ಘಟನೆ ಕೂಡ ನಡೆಯಿತು. ಕೆಪಿಎಸ್ ಸಿ ಪರೀಕ್ಷೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮೈಸೂರಿನ ಕುಕ್ಕರಹಳ್ಳಿ ನಿವಾಸಿ ಪರಶುರಾಮ ಎಂಬಾತ ಕೂಗಾಟ ನಡೆಸಿದ್ದ. ಕೂಡಲೇ ಆತನನ್ನು ಕಬ್ಬನ್ ಪಾರ್ಕ್ ಪೊಲೀಸರು ಠಾಣೆಗೆ ಕರೆದೊಯ್ದರು. ಅತನನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಆತನಿಗೆ ನ್ಯಾಯ ಕೊಡಿಸೊಣ ಎಂದು ತಮ್ಮ ಭಾಷಣವನ್ನು ಮುಂದವರೆಸಿದರು.
Advertisement