
ಬೆಂಗಳೂರು: ಕಾವೇರಿ ವಿವಾದದಿಂದಾಗಿ ಸೋಮವಾರ ಭುಗಿಲೆದ್ದಿದ್ದ ಹಿಂಸಾಚಾರದಿಂದಾಗಿ ಜಿಲ್ಲಾಡಳಿತ ಬುಧವಾರ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಇಂದು ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ಕಾರಣ ಇದೀಗ ರಜೆಯನ್ನು ಜಿಲ್ಲಾಡಳಿತ ಹಿಂಪಡೆದಿದೆ.
ನಿನ್ನೆ ಬೆಂಗಳೂರು ಅಕ್ಷರಶಃ ಹಿಂಸಾಚಾರಕ್ಕೆ ಒಳಗಾಗಿದ್ದರಿಂದ ನಗರ ಪೊಲೀಸ್ ಆಯುಕ್ತ ಎಂ.ಎನ್. ಮೇಘರಿಕ್ ಅವರು ನಗರದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದರಿಂದ ನಾಳೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಿದ್ದ ರಜೆಯನ್ನು ಜಿಲ್ಲಾಡಳಿತ ಹಿಂಪಡೆದಿದೆ ಎಂದು ನಗರ ಜಿಲ್ಲಾಧಿಕಾರಿ ವಿ ಶಂಕರ್ ಸ್ಪಷ್ಟಪಡಿಸಿದ್ದಾರೆ.
ನಾಳೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಇದನ್ನು ಅನುಸರಿಸಿ ಖಾಸಗಿ ಶಾಲಾ-ಕಾಲೇಜುಗಳಿಗೂ ಖಾಸಗಿ ಶಾಲೆಗಳ ಒಕ್ಕೂಟ ರಜೆ ಘೋಷಿಸಿತ್ತು. ಆದರೆ ಇದೀಗ ಜಿಲ್ಲಾಡಳಿತ ರಜೆಯನ್ನು ಹಿಂಪಡೆದಿರುವುದರಿಂದ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಅವರು ಗೊಂದಲಕ್ಕೆ ಸಿಲುಕಿದ್ದು, ತಮ್ಮ ಶಾಲೆಗಳಿಗೆ ರಜೆ ಘೋಷಿಸುವ ಅಧಿಕಾರ ಆಯಾ ಶಾಲೆಗಳಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಆದರೆ ನಾಳೆ ಪರಿಸ್ಥಿತಿ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಶಶಿಕುಮಾರ್ ಹೇಳಿದ್ದಾರೆ.
Advertisement