ಕಾವೇರಿ ವಿವಾದ: ಅಹಂ ಬಿಟ್ಟು ಪ್ರಧಾನಿ, ಮುಖ್ಯಮಂತ್ರಿಗಳು ಸಮಸ್ಯೆಗೆ ಪರಿಹಾರ ಹುಡುಕಲಿ- ಮಾದೇಗೌಡ

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ತಮ್ಮ ಅಹಂ ಬಿಟ್ಟು ಕಾವೇರಿ ವಿವಾದ ಕುರಿತಂತೆ ಪರಿಹಾರ ಹುಡುಕಬೇಕಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ...
ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ
ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ತಮ್ಮ ಅಹಂ ಬಿಟ್ಟು ಕಾವೇರಿ ವಿವಾದ ಕುರಿತಂತೆ ಪರಿಹಾರ ಹುಡುಕಬೇಕಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಕಾವೇರಿ ವಿವಾದ ಬಗೆಹರಿಕೆಗೆ ರಾಷ್ಟ್ರೀಯ ಜಲನೀತಿಯ ಅಗತ್ಯವಿದೆ. ವಿವಾದ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕಿದೆ ಎಂದು ಸಾಕಷ್ಟು ಬಾರಿ ನಾನು ಹೇಳಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಎರಡು ರಾಜ್ಯಗಳ ನಾಯಕರನ್ನು ಕೂರಿಸಿ ಮಾತುಕತೆ ನಡೆಸಬೇಕಿದೆ ಎಂದು ಹೇಳಿದ್ದೆ. ತಮಿಳುನಾಡು ರಾಜ್ಯವು ಕರ್ನಾಟಕದೊಂದಿಗೆ, ಕೇರಳ, ಕರ್ನಾಟಕದ ಜೊತೆಗೆ ಗೋವಾ ಮತ್ತು ಮಹಾರಾಷ್ಟ್ರದೊಂದಿಗೆ ವಿವಾದಗಳನ್ನು ಹೊಂದಿದೆ. ವಿವಾದವನ್ನು ಗಂಭೀರವಾಗಿ ಪರಿಗಣಿಸಿದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದೊಂದು ದೇಶಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಮೈಸೂರಿನವರೇ ಆಗಿದ್ದು, ಕಾವೇರಿ ವಿವಾದದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆಂದು ಅವರ ಮೇಲೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದೆ. ಸಿದ್ದರಾಮಯ್ಯ ಅವರು ರೈತರ ಹಿತಾಸಕ್ತಿಗಳಿಗೆ ರಕ್ಷಣೆ ನೀಡಬೇಕಿತ್ತು. ಆದರೆ, ಇದರಲ್ಲಿ ಅವರು ವಿಫಲವಾಗಿದ್ದಾರೆ.

ಸಿದ್ದರಾಮಯ್ಯ ಅವರು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೆದರಿ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲು ಒಪ್ಪಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಕುಳಿತು ಮಾತನಾಡುವುದನ್ನು ಬಿಟ್ಟು ಮೊದಲು ಸಿದ್ದರಾಮಯ್ಯ ಅವರು ಮಂಡ್ಯಗೆ ಬಂದು ಜನರೊಂದಿಗೆ ಮಾತನಾಡಬೇಕಿದೆ. ತಮ್ಮ ಸರ್ಕಾರದ ಬದ್ಧತೆಗಳ ಬಗ್ಗೆ ಜನರಿಗೆ ವಿವರಣೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

ಕಾವೇರಿ ನೀರನ್ನೇ ನಂಬಿ ಜೀವನ ನಡೆಸುತ್ತಿರುವ ರೈತರು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು, ಜಲಾಶಯಗಳ ನೀರಿನ ಮಟ್ಟ ಕಾಪಾಡುವಲ್ಲಿ ಮತ್ತು ಕಾವೇರಿ ನೀರಿನ ಮೇಲಿರುವ ಅವಲಂಬನೆ ಕುರಿತಂತೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ವೈಫಲ್ಯವನ್ನು ಕಂಡಿದೆ. ರಾಜ್ಯದಲ್ಲಿರುವ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಅವರು ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಬೇಕಿತ್ತು. ಆದರೆ, ಅದನ್ನು ಅವರು ಮಾಡಿಲ್ಲ. ಕಾವೇರಿ ನೀರು ಕುರಿತಂತೆ ನ್ಯಾಯಾಲಯದಲ್ಲಿ ಅವೈಜ್ಞಾನಿಕವಾಗಿ ವಾದ ಮಂಡಿಸಿ ವೈಫಲ್ಯವನ್ನು ಕಂಡಿದ್ದಾರೆ.

ಕಾವೇರಿ ನೀರು ಬಿಡುಗಡೆ ಮಾಡುವಂತೆ ದೇವೇಗೌಡ ಅವರು ಬೆಂಬಲ ಸೂಚಿಸಿರುವುದು ದುರಾದೃಷ್ಟಕರ ವಿಚಾರ. ನಿನ್ನೆಯಷ್ಟೇ ದೇವೇಗೌಡ ಅವರು ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಆದರೆ, ಇಂದು ನ್ಯಾಯಾಲಯದ ತೀರ್ಪು ಜನರಿಗೆ ಪಾಷಾಣವಾಗಿದೆ ಎಂದು ಹೇಳುತ್ತಿದ್ದಾರೆ. ದೇವೇಗೌಡ ಅವರ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಅವರು ನೀರು ಬಿಡದಂತೆ ಆಗ್ರಹಿಸಿದ್ದರು. ದೇವೇಗೌಡ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಕ್ತ ರೀತಿಯ ಸಲಹೆ ನೀಡುತ್ತಾರೆಂದು ನಂಬಿದ್ದೆ. ಆದರೆ, ಅದು ಸಾಧ್ಯವಾಗಿಲ್ಲ.

ಡಿಸೆಂಬರ್ ನಂತರದ ದಿನಗಳಲ್ಲಿ ರಾಜ್ಯಕ್ಕೆ ನಿಜವಾದ ಸವಾಲು ಎದುರಾಗಲಿದೆ. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇನ್ನಿತರೆ ನಗರಗಳಿಗೆ ಕುಡಿಯುವುದಕ್ಕೇ ನೀರಿನ ಬರ ಎದುರಾಗಲಿದೆ. 2 ಕೋಟಿ ಜನರಿಗೆ ಸರ್ಕಾರ ಎಲ್ಲಿಂದ ನೀರು ತರಲಿದೆ? ಎಂದು ಪ್ರಶ್ನಿಸಿದ್ದಾರೆ.

ರೈತರ ಸಂಕಷ್ಟ ಕುರಿತಂತೆ ಕಾವೇರಿ ರೈತ ಹಿತರಕ್ಷಣಾ ಸಮಿತಿಯು ಸರ್ಕಾರಕ್ಕೆ ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಿದೆ. ಈ ಮೊದಲು ಸರ್ಕಾರ ಕೃಷಿಗೆ ನೀರು ನೀಡುವುದಾಗಿ ಭರವಸೆ ನೀಡಿತ್ತು. ನಂತರ ಯೂ-ಟರ್ನ್ ಹೊಡೆದು ಬೆಂಗಳೂರು, ಮೈಸೂರು ಹಾಗೂ ಇನ್ನಿತರೆ ನಗರಕ್ಕೆ ಕುಡಿಯುವ ನೀರಿನ ಅಗತ್ಯವಿದ್ದು, ಕೃಷಿಗೆ ನೀರು ಬಿಡುವುದಿಲ್ಲ ಎಂದು ಘೋಷಣೆಮಾಡಿತ್ತು.

ಪ್ರತೀ ಎಕರೆಗೆ ರೈತ ರು.15 ಸಾವಿರ ಖರ್ಚು ಮಾಡುತ್ತಿದ್ದಾರೆ. ರೈತರಿಗೆ ಕೃಷಿಯೇ ಜೀವನವಾಗಿದೆ. ಇನ್ನು ಇಂತಹ ರೈತರ ಕೃಷಿಗಳಿಗೆ ಸರ್ಕಾರ ನೀರು ಬಿಡದೇ ಹೋದಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ. ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ರೈತರಿಗೆ ಪ್ರತೀ ಎಕರೆಗೆ ರು.20 ಸಾವಿರ ಪರಿಹಾರವನ್ನು ಸರ್ಕಾರ ಘೋಷಣೆ ಮಾಡದಿದ್ದಲ್ಲಿ ಸರ್ಕಾರವನ್ನು ನ್ಯಾಯಾಲಯದ ಅಂಗಣಕ್ಕೆ ಕರೆದೊಯ್ಯಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರು ರಾಜಕೀಯದ ಮೇಲಿನ ಶಕ್ತಿ ಹಾಗೂ ನೈತಿಕ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿಯಾಗಿದೆ. ಮೈಸೂರು-ಮಂಡ್ಯ ಜನರಿಗೆ ಸರ್ಕಾರ ಹಾಗೂ ರಾಜಕೀಯ ನಾಯಕರ ಮೇಲಿರುವ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.

ಮಹಾರಾಜರು ಹಾಗೂ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಆಡಳಿತವನ್ನು ನಾನು ನೋಡಿದ್ದೇನೆ. ರಾಜರ ಆಡಳಿತಕ್ಕಿಂತ ಇಂದು ನಾವು ಉತ್ತಮ ಸ್ಥಾನದಲ್ಲಿದ್ದೇವೆಂದುಕೊಂಡಿದ್ದೆ. ರೈಲು ಅಪಘಾತದ ಜವಬ್ದಾರಿಯನ್ನು ಹೊತ್ತ ಲಾಲ್ ಬಹದ್ದೂರ್ ಶಾಸ್ತಿರ ಅವರು ಸಚಿವಾಲಯಕ್ಕೆ ರಾಜಿನಾಮೆಯನ್ನು ಸಲ್ಲಿಸಿ, ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಸಚಿವಾಲಯದಲ್ಲಿ ಅಕ್ರಮಗಳು ಕಂಡುಬಂದ ಹಿನ್ನೆಲೆ ಕೈಗಾರಿಕಾ ಸಚಿವ ಸೋಮಲಿಂಗಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಅಂದಿನ ನಾಯಕರು ನೈತಿಕ ಮೌಲ್ಯಗಳನ್ನು ಉಳ್ಳ ನಾಯಕರಾಗಿದ್ದರು. ಇಂದಿನ ನಾಯಕರಲ್ಲಿ ನೈತಿಕ ಮೌಲ್ಯಗಳೇ ಇಲ್ಲದಾಗಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com