ಬೆಂಗಳೂರು: ಮುಂದಿನ ವರ್ಷ ಏಪ್ರಿಲ್ ನಿಂದ ನಮ್ಮ ಮೆಟ್ರೋದ ಮೊದಲ ಹಂತ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ಉತ್ತರ-ದಕ್ಷಿಣ ಕಾರಿಡಾರ್ ನಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ನೇಮಕಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ ನೇಮಕಾತಿಗೆ ನಾಡಿದ್ದು ಭಾನುವಾರ ಪರೀಕ್ಷೆ ನಡೆಯಲಿದ್ದು ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದೆ. 308 ಹುದ್ದೆಗಳಿಗೆ 53 ಸಾವಿರದ 824 ಆಕಾಂಕ್ಷಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಸೆಕ್ಷನ್ ಎಂಜಿನಿಯರಿಂಗ್ ನ 11 ಹುದ್ದೆಗಳಿಗೆ 9 ಸಾವಿರದ 638 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಅವರಲ್ಲಿ 876 ಮಂದಿ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ ಎಂದು ಬಿಎಂಆರ್ ಸಿಎಲ್ ನ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಹರಿಸ್ವಾಮಿ ಹೇಳುತ್ತಾರೆ.
ಮೆಟ್ರೋದಲ್ಲಿ ನೇಮಕಾತಿಗೊಳ್ಳಲಿರುವ ಇನ್ನೆರಡು ಹುದ್ದೆಗಳು ರೈಲು ನಿರ್ವಾಹಕರು (TOS) ಮತ್ತು ಪಾಲಕರು. ರೈಲು ನಿರ್ವಾಹಕರ 225 ಹುದ್ದೆಗಳಿಗೆ 25 ಸಾವಿರದ 890 ಅರ್ಜಿಗಳು ಮತ್ತು 72 ಪಾಲಕರ ಹುದ್ದೆಗಳಿಗೆ 18 ಸಾವಿರದ 296 ಅರ್ಜಿಗಳು ಬಂದಿವೆ ಎನ್ನುತ್ತಾರೆ ಅವರು.
ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ಮಾಹಿತಿ ತಂತ್ರಜ್ಞಾನ ವಿಭಾಗದ ವ್ಯವಸ್ಥಾಪಕ ರಂಗನಾಥ್ ಪಿ.ದೇಶಪಾಂಡೆ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ನಡೆಯುತ್ತಿರುವ ಆರನೇ ಸುತ್ತಿನ ನೇಮಕಾತಿ ಪ್ರಕ್ರಿಯೆ. ಬೇರೆ ರಾಜ್ಯಗಳ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದ್ದರೂ ಕೂಡ ಅಭ್ಯರ್ಥಿಗಳು ಕನ್ನಡ ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬಲ್ಲವರಾಗಿರಬೇಕೆಂದು ನಿಯಮವಿದೆ.