ಅಭಿಮಾನ್ ಅ೦ಗಳಕ್ಕೆ ಕಾಲಿರಿಸದಿರಲು ಭಾರತಿ ವಿಷ್ಣುವರ್ಧನ್ ನಿರ್ಧಾರ!

ಸಾಹಸ ಸಿಂಹ ವಿಷ್ಣುವರ್ಧನ್ ಅವರ 67ನೇ ಜನ್ಮ ದಿನೋತ್ಸವ ಆಚರಣೆಯಲ್ಲಿರುವ ವಿಷ್ಣು ಅಭಿಮಾನಿಗಳಿಗೆ ಅವರ ಕುಟುಂಬದಿಂದ ಆಘಾತಕಾರಿ ಸುದ್ದಿ ಹೊರಿಬಿದ್ದಿದ್ದು, ಪ್ರಸ್ತುತ ವಿಷ್ಣು ಸ್ಮಾರಕವಿರುವ ಅಭಿಮಾನ್...
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸ್ಮಾರಕ (ಸಂಗ್ರಹ ಚಿತ್ರ)
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸ್ಮಾರಕ (ಸಂಗ್ರಹ ಚಿತ್ರ)

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅವರ 67ನೇ ಜನ್ಮ ದಿನೋತ್ಸವ ಆಚರಣೆಯಲ್ಲಿರುವ ವಿಷ್ಣು ಅಭಿಮಾನಿಗಳಿಗೆ ಅವರ ಕುಟುಂಬದಿಂದ ಆಘಾತಕಾರಿ ಸುದ್ದಿ ಹೊರಿಬಿದ್ದಿದ್ದು,  ಪ್ರಸ್ತುತ  ವಿಷ್ಣು ಸ್ಮಾರಕವಿರುವ ಅಭಿಮಾನ್ ಸ್ಟುಡಿಯೋಗೆ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬ ತೆರಳದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ವರ್ಷಗಳಿಂದ ವಿಷ್ಣು ಸ್ಮಾರಕ ನಿರ್ಮಾಣ ವಿಚಾರ ನೆನೆಗುದಿಗೆ ಬಿದ್ದಿದ್ದು, ಈವರೆಗೂ ಸ್ಮಾರಕ ನಿರ್ಮಾಣ ವಿಚಾರ ಪ್ರಗತಿ ಕಂಡಿಲ್ಲ. ಸ್ಮಾರಕ ನಿರ್ಮಾಣ ವಿಚಾರಕ್ಕೆ  ಸಂಬಂಧಿಸಿದಂತೆ ಅಭಿಮಾನ್ ಸ್ಟುಡಿಯೋದ ಮಾಲೀಕರಾದ ದಿವಂಗತ ನಟ ಬಾಲಕೃಷ್ಣ ಅವರ ಕುಟುಂಬಸ್ಥರೊಂದಿಗೆ ನಡೆದ ಹಲವು ಚರ್ಚೆಗಳು ವಿಫಲವಾಗಿದ್ದು, ಇತ್ತೀಚೆಗೆ ನಡೆದ ಸಂಧಾನ  ಮಾತುಕತೆ ಕೂಡ ವಿಫಲವಾಗಿದೆ ಎಂದು ತಿಳಿದುಬಂದಿದೆ. ಇದರಿಂದ ತೀವ್ರ ನೊಂದಿರುವ ಭಾರತಿ ವಿಷ್ಣು ವರ್ಧನ್ ಅವರು ಇನ್ನೆಂದೂ ಅಭಿಮಾನ್ ಸ್ಟುಡಿಯೋಗೆ ತಾವಾಗಲಿ ತಮ್ಮ  ಕುಟುಂಬದವರಾಗಲಿ ಕಾಲಿಡುವುದಿಲ್ಲ ಎಂದು ನಿರ್ಧರಿಸಿದ್ದಾರಂತೆ.

ಈ ಬಗ್ಗೆ ಹೇಳಿಕೊಂಡಿರುವ ವಿಷ್ಣು ವರ್ಧನ್ ಅವರ ಅಳಿಯ ಹಾಗೂ ನಟ ಅನಿರುದ್ಧ್ ಅವರು,  "ಕೆಲವೇ ತಿ೦ಗಳುಗಳ ಹಿ೦ದೆ ಸ್ಮಾರಕದ ವಿಚಾರದಲ್ಲಿ ವಿಷ್ಣುವರ್ಧನ್ ಅವರಿಗೆ ಅವಮಾನ ಆಗುವ  ರೀತಿಯಲ್ಲಿ ಕೆಲವರು ನಡೆದುಕೊ೦ಡರು. ಒಮ್ಮೆ ಅವಮಾನ ಆದ ಜಾಗಕ್ಕೆ ವಿಷ್ಣುವರ್ಧನ್ ಅವರು ಮತ್ತೆ ಹೋಗುತ್ತಿರಲಿಲ್ಲ. ಹಾಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಹುಟ್ಟುಹಬ್ಬ ಆಚರಿಸಲು  ನಮಗೂ ಇಷ್ಟವಿಲ್ಲ' ಎ೦ದು ಹೇಳಿದ್ದಾರೆ.

ವಿಷ್ಣು ಕುಟುಂಬ ಇಂದು ತಮ್ಮ ನಿವಾಸದಲ್ಲೇ ಹುಟ್ಟುಹಬ್ಬ ಆಚರಣೆ ಮಾಡಲು ನಿರ್ಧರಿಸಿದ್ದು, ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮೈಸೂರಿನಲ್ಲಿ ಸರ್ಕಾರ ನೀಡಿರುವ ಜಾಗದಲ್ಲೇ ಸ್ಮಾರಕ ನಿರ್ಮಾಣ  ಕಾರ್ಯ ಮಾಡುವ ಕುರಿತು ನಿರ್ಧರಿಸಲಾಗಿದೆ ಎಂದು ವಿಷ್ಣು ಕುಟುಂಬದ ಮೂಲಗಳು ತಿಳಿಸಿವೆ.

ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆಯಾದರೂ, ಈ ಬಗ್ಗೆ ವಿಷ್ಣುವರ್ಧನ್ ಅಭಿಮಾನಿ ಬಳಗ ವಿಷ್ಣು ಸೇನಾ ಸಮಿತಿಯ ಹೇಳುವುದೇ ಬೇರೆ. ಅಭಿಮಾನ್ ಸ್ಟುಡಿಯೋದಿ೦ದ ಮ್ಯೆಸೂರಿಗೆ  ಸ್ಮಾರಕ ಸ್ಥಳಾ೦ತರವಾಗುವುದನ್ನು ಸಮಿತಿ ವಿರೋಧಿಸುತ್ತಿದೆ. ವಿಷ್ಣು ಕುಟು೦ಬದವರು ಬಾರದಿದ್ದರೂ ವಿಷ್ಣು ಅವರು ಪ೦ಚಭೂತಗಳಲ್ಲಿ ಲೀನವಾದ ಅಭಿಮಾನ್ ಸ್ಟುಡಿಯೋ ಆವರಣದಲ್ಲಿಯೇ  "ಸಾಹಸ ಸಿ೦ಹ"ನ ಜನ್ಮದಿನ ಆಚರಿಸಲು ಸಮಿತಿ ಸದಸ್ಯರು ಸಕಲ ಸಿದ್ಧತೆ ಮಾಡಿಕೊ೦ಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com