
ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಬಂಧಿತರಾಗಿದ್ದ ಎಲ್ಲ ಆರೋಪಿಗಳಿಗೆ ಹೈಕೋರ್ಟ್ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್, 420 ಭಾಸ್ಕರ್, ರಿಯಾಜ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿಗಳು 1 ಲಕ್ಷ ರು. ಬಾಂಡ್, ಭದ್ರತಾ ಶ್ಯೂರಿಟಿ, ಪಾಸ್ ಪೋರ್ಟ್ ಅನ್ನು ಎಸ್ಐಟಿ ತನಿಖಾಧಿಕಾರಿಗಳಿಗೆ ನೀಡಬೇಕು ಮತ್ತು ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳನ್ನು ನಾಶ ಪಡಿಸದಂತೆ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂದು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ. ಅಲ್ಲದೆ ಅನುಮತಿ ಇಲ್ಲದೆ ಊರು ಬಿಡದಂತೆ ನ್ಯಾಯಾಲಯ ಅರೋಪಿಗಳಿಗೆ ಎಚ್ಚರಿಕೆ ನೀಡಿದೆ.
ಈ ಹಿಂದೆಯೂ ಹೈಕೋರ್ಟ್ ಜಾಮೀನಿಗೆ ಅರ್ಜಿ ಹಾಕಿದ್ದರು ಆದರೆ ಆದರೆ ಪ್ರಕರಣ ಗಂಭೀರವಾದದ್ದು ಜಾಮೀನು ನೀಡಬಾರದು ಎಂದು ಎಸ್'ಐಟಿ ಸುಪ್ರೀಂ ಕೋರ್ಟ್'ಗೆ ಮೊರೆ ಹೋಗಿತ್ತು. ಹೀಗಾಗಿ ಜಾಮೀನು ನೀಡಿರಲಿಲ್ಲ. ಲೋಕಾಯುಕ್ತ ಭ್ರಷ್ಟಾಚಾರ ಸಂಬಂಧ ಕಳೆದೊಂದು ವರ್ಷದಿಂದ ಅಶ್ವಿನ್ ರಾವ್, ರಿಯಾಜ್, 420 ಭಾಸ್ಕರ್, ಶಂಕರೇಗೌಡ, ಶ್ರೀನಿವಾಸಗೌಡ, ಅಶೋಕ್ ಕುಮಾರ್, ನರಸಿಂಹರಾವ್, ರಾಜಶೇಖರ್ ಸೇರಿದಂತೆ ಎಲ್ಲ ಆರೋಪಿಗಳು ಜೈಲು ವಾಸದಲ್ಲಿದ್ದರು. ಈದೀಗ ಹೈಕೋರ್ಟ್ ಜಾಮೀನು ನೀಡಿರುವುದರಿಂದ ಎಲ್ಲ 13 ಮಂದಿ ಆರೋಪಿಗಳು ಜೈಲು ಮುಕ್ತರಾಗಲಿದ್ದಾರೆ.
Advertisement