
ಬೆಂಗಳೂರು: ಮಾನ್ಸೂನ್ ಮಳೆ ಕೊರತೆ, ಕಾವೇರಿಗಾಗಿ ತಮಿಳುನಾಡು ಖ್ಯಾತೆಯಿಂದಾಗಿ ರಾಜ್ಯ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದು, ಕಾವೇರಿ ನೀರಿನಿಂದ ಉಂಟಾಗಿರುವ ಅಭಾವ ಹಿನ್ನೆಲೆಯಲ್ಲಿ ಅಧಿಕಾರಿಗಳು ಇದೀಗ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪರಿಶೀಲನೆ ಮಾಡಲು ಮುಂದಾಗಿದ್ದಾರೆ.
ಕಾವೇರಿ ನೀರು ಅಭಾವದಿಂದಾಗಿ ನಗರ ಜನತೆಗೆ ಕುಡಿಯುವ ನೀರಿನ ಸಮಸ್ಯೆಯುಂಟಾಗಲಿದ್ದು, ಈ ಹಿನ್ನೆಲೆಯಲ್ಲಿ ನಗರಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂ ಎಸ್ಎಸ್ ಬಿ) ಅಧಿಕಾರಿಗಳು ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪರಿಶೀಲನೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಜಲಾಶಯವನ್ನು ಪರಿಶೀಲನೆ ಮಾಡಲಾಗಿದೆ. ನಗರ ಜನತೆಗೆ ಕನಿಷ್ಟ ಪಕ್ಷ ತಿಂಗಳಮಟ್ಟಿಗಾದರೂ ಕುಡಿಯುವ ನೀರು ಪೂರೈಕೆ ಮಾಡುವಷ್ಟು ನೀರು ಜಲಾಶಯದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಿಜೆ. ಹಳ್ಳಿ ಜಲಾಶಯದಿಂದ ನೀರನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಸಾಕಷ್ಟು ವರ್ಷಗಳೇ ಆಗಿವೆ. ಕುಡಿಯಲು ಯೋಗ್ಯವಾಗಿದೆಯೇ ಇಲ್ಲವೇ ಹಾಗೂ ನೀರನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬುದರ ಕುರಿತಂತೆ ಪರಿಶೀಲನೆ ನಡೆಸಬೇಕಿದೆ ಎಂದು ಅವರು ಹೇಳಿದ್ದಾರೆ.
ನಗರ ಜನತೆಗೆ ಪ್ರತೀನಿತ್ಯ 1,400 ಮಿಲಿಯನ್ ಲೀಟರ್ ನಷ್ಟು ನೀರು ಕುಡಿಯಲು ಅಗತ್ಯವಿದೆ. ಟಿಜೆ. ಹಳ್ಳಿ ಜಲಾಶಯದಲ್ಲಿ ಪ್ರಸ್ತುತ 1.35 ಟಿಎಂಸಿ ನೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement