ಬೆಂಗಳೂರು: ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್ ಯೋಜನೆಗೆ ಆಗಸ್ಟ್ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲು ನಿರ್ಧರಿಸಿದ್ದು, ಇನ್ನು 11 ದಿನದಲ್ಲಿ 55 ಕ್ಯಾಂಟೀನ್ ಗಳ ನಿರ್ಮಾಣ ಕೆಲಸ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರ ಡೆಡ್ ಲೈನ್ ನೀಡಿದೆ.
ಉದ್ದೇಶಿಸಿತ 125 ಕ್ಯಾಂಟೀನ್ ಗಳ ಪೈಕಿ ಈಗಾಗಲೇ 70 ಕ್ಯಾಂಟೀನ್ ಗಳ ಕಾರ್ಯ ಪೂರ್ಣಗೊಂಡಿದ್ದು, ಉಳಿದ 55 ಕ್ಯಾಂಟೀನ್ ಗಳ ಕಾರ್ಯವನ್ನು ಮುಂದಿನ 11 ದಿನಗಳಲ್ಲಿ ಮುಗಿಸುವಂತೆ ಬಿಬಿಎಂಪಿಗೆ ಕಟ್ಟು ನಿಟ್ಟಿನಿ ಆದೇಶ ನೀಡಲಾಗಿದೆ.
ಸರ್ಕಾರದ ಈ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಜಿ ಪದ್ಮಾವತಿ ಹಾಗೂ ಅವರ ತಂಡ ಕ್ಯಾಂಟೀನ್ ಗಾಗಿ ಪೂರ್ವ ತಯಾರಿಸಿದ ಫಲಕಗಳನ್ನು ನಿರ್ಮಾಣ ಮಾಡುವ ತಮಿಳುನಾಡಿನ ಕೃಷ್ಣಗಿರಿಯ ನಿರ್ಮಾಣ ಘಟಕಕ್ಕೆ ಭೇಟಿ ನೀಡಿದೆ.
ರಾಜ್ಯ ಸರ್ಕಾರ ಬಿಬಿಎಂಪಿ 198 ವಾರ್ಡ್ ಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲು ನಿರ್ಧರಿಸಿದೆ. ಆದರೆ ಸ್ವಾತಂತ್ರ್ಯೋತ್ಸವ ದಿನದಂದು ಕೇವಲ 125 ಇಂದಿರಾ ಕ್ಯಾಂಟೀನ್ ಗಳಿಗೆ ಚಾಲನೆ ನೀಡಲಾಗುತ್ತಿದ್ದು, ಉಳಿದ ಕ್ಯಾಂಟೀನ್ ಗಳಿಗೆ ಅಕ್ಟೋಬರ್ 2ರಂದು ಚಾಲನೆ ನೀಡಲಾಗುತ್ತಿದೆ.
125 ಕ್ಯಾಂಟೀನ್ ಗಳ ಪೈಕಿ 70 ಕ್ಯಾಂಟೀನ್ ಗಳ ಕೆಲಸ ಪೂರ್ಣಗೊಂಡಿದ್ದು, 55 ಕ್ಯಾಂಟೀನ್ ಗಳ ಕೆಲಸ ಪ್ರಗತಿಯಲ್ಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.