ಕೌಶಲ್ಯ ಕರ್ನಾಟಕ ಕಾರ್ಯಕ್ರಮದಿಂದ ಪ್ರತೀ ವರ್ಷ 5 ಲಕ್ಷ ಯುವಕರಿಗೆ ತರಬೇತಿ: ಸಿಎಂ ಸಿದ್ದರಾಮಯ್ಯ

71ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 71ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.

ನಗರದ ಮಾಣಿಕ್ ಷಾ ಪೆರೆಡ್​ ಮೈದಾನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ  ಅವರು, ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸಿದ ಹೋರಾಟಗಾರರಿಗೆ ಮತ್ತು ಹುತಾತ್ಮ ದೇಶಭಕ್ತರಿಗೆ ಮೊದಲಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಹೇಳಿದರು. ಅಂತೆಯೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ  ಯೋಧರ ಕುಟುಂಬದವರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಬಸವಣ್ಣ ಮತ್ತು ಅವರ ತತ್ವಗಳನ್ನು ಒತ್ತಿ ಹೇಳಿದ ಸಿಎಂ ಸಿದ್ದರಾಮಯ್ಯ ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ,

"ಬಸವಣ್ಣ, ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್​ ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಹಾಕಲಾಗಿದೆ. ಅಭಿವೃದ್ಧಿ ಮಾದರಿಗೆ ಸಾಮಾಜಿಕ ನ್ಯಾಯದ ಕನಸುಗಾರ ಬಸವಣ್ಣನವರ ಬಹುಭಾಷೆ,  ಬಹುಸಂಸ್ಕೃತಿ, ಬಹುಮಾದರಿಯ ಬಹುತ್ವ ವ್ಯವಸ್ಥೆ ಸ್ಥಾಪಿಸಲಾಗುವುದು.

"ಕೃಷಿಗೆ ರಾಜ್ಯ ಸರ್ಕಾರ 40 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದು, ರಾಜ್ಯದಲ್ಲಿ 1.67 ಲಕ್ಷಕ್ಕೂ ಹೆಚ್ಚು ಕೃಷಿ ಹೊಂಡ ನಿರ್ಮಾಣ, 2,500 ಪಾಲಿ ಹೌಸ್​ ನಿರ್ಮಾಣ ಮಾಡಲಾಗಿದೆ. ಅಂತೆಯೇ ಹಾಲು ಉತ್ಪಾದಕರಿಗೆ 5 ರು.  ಪ್ರೋತ್ಸಾಹಧನ, ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರುಗಳ ವರೆಗೆ ಸಾಲ ಹಾಗೂ ಗುಡಿಸಲು ಮುಕ್ತ ರಾಜ್ಯ ನಿರ್ಮಾಣಕ್ಕೆ 11.75 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಲಾಗಿದೆ. ಈ ಪೈಕಿ ಈ ವರ್ಷವೇ 7 ಲಕ್ಷ ಮನೆಗಳ ನಿರ್ಮಾಣ  ಮಾಡಲಾಗುತ್ತದೆ".

"ರಾಜ್ಯದಲ್ಲಿ 9,300 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಈಗಾಗಲೇ ಅವುಗಳ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಶೌಚಾಲಯಕ್ಕಾಗಿ ಸಮರ ಕಾರ್ಯಕ್ರಮದಡಿ 28 ಲಕ್ಷ ಶೌಚಾಲಯ  ನಿರ್ಮಾಣ, 2,500 ಗ್ರಾಮಪಂಚಾಯತ್​ ಗಳಿಗೆ ವೈಫೈ ಸೌಲಭ್ಯ, ಉದ್ಯೋಗ ಖಾತ್ರಿ ಯೋಜನೆಯಡಿ 52.7 ಲಕ್ಷ ಕುಟುಂಬಕ್ಕೆ ಉದ್ಯೋಗ, 2016ನೇ ಸಾಲಿನಲ್ಲಿ 1,54,173 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ.

ಕೌಶಲ್ಯ ಕರ್ನಾಟಕ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಯೋಜನೆಯಡಿ ಪ್ರತಿ ವರ್ಷ 5 ಲಕ್ಷ ಯುವಜನತೆಗೆ ತರಬೇತಿ. ಹೈ-ಕ ಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಅಂತೆಯೇ 2016ನೇ ಸಾಲಿನಲ್ಲಿ 1.6  ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು. ಅಡುಗೆ ಅನಿಲ ಇಲ್ಲದ ಕುಟುಂಬಗಳಿಗೆ ಉಚಿತ ಗ್ಯಾಸ್​ ಸಿಲಿಂಡರ್, ಸೀಮೆಎಣ್ಣೆ ಮುಕ್ತ ರಾಜ್ಯ ನಿರ್ಮಾಣಕ್ಕೆ ಯೋಜನೆ ಶುರುವಾಗಿದೆ.

ಕರ್ನಾಟಕ ಭೂಸುಧಾರಣಾ ತಿದ್ದುಪಡಿ ವಿಧೇಯಕ ಜಾರಿ ಮಾಡಲಾಗಿದ್ದು, ಕರ್ನಾಟಕ ಸಹಸ್ರ ಕ್ರೀಡಾ ಪ್ರತಿಭಾ ಯೋಜನೆಗೆ 10 ಕೋಟಿ ಮೀಸಲಿಡಲಾಗಿದೆ. ಯಶಸ್ವಿನಿ ಯೋಜನೆಯಡಿ 93 ಲಕ್ಷ ಸದಸ್ಯರ ನೋಂದಣಿ. ಯಶಸ್ವಿನಿ  ಯೋಜನೆಗೆ 555 ಕೋಟಿ ವೆಚ್ಚ ಭರಿಸಲಾಗಿದೆ. ಅಂತೆಯೇ 25 ಕೋಟಿ ರು. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಯ ಗುರಿ ಹೊಂದಲಾಗಿದೆ. ಮೊದಲನೆ ಹಂತದ ಮೆಟ್ರೋವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗಿದ್ದು,  ಮೊದಲ ಹಂತದಲ್ಲಿ 42.3 ಕಿ.ಮೀ ಉದ್ದದ ಮೆಟ್ರೋ ಯೋಜನೆ ಸಿದ್ಧವಾಗಿದೆ. 2ನೇ ಹಂತದಲ್ಲಿ 72 ಕಿ.ಮೀ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, 2020ರ ವೇಳೆಗೆ 2ನೇ ಹಂತದ ಮೆಟ್ರೋ ಪೂರ್ಣಗೊಳ್ಳಲಿದೆ. ಇದೀಗ 3ನೇ ಹಂತದ  ಮೆಟ್ರೋಗೆ ಚಿಂತಿಸುತ್ತಿದ್ದು, 3ನೇ ಹಂತದಲ್ಲಿ 92 ಕಿ.ಮೀ ಮೆಟ್ರೋ ಯೋಜನೆ ಮಾಡುವ ಉದ್ದೇಶ ಹೊಂದಲಾಗಿದೆ.

ಸರ್ಕಾರದ ಬಹು ಉದ್ದೇಶಿತ ಇಂದಿರಾ ಕ್ಯಾಂಟೀನ್ ನಾಳೆಯಿಂದಲೇ ಆರಂಭವಾಗಲಿದ್ದು, ನಾಳೆಯೇ 101 ಇಂದಿರಾ ಕ್ಯಾಂಟೀನ್ ಗಳು​ ಆರಂಭವಾಗಲಿದೆ. ಬೆಂಗಳೂರಿನ ಎಲ್ಲ 198 ವಾರ್ಡ್​ಗಳಲ್ಲಿ ಇಂದಿರಾ ಕ್ಯಾಂಟೀನ್​  ಪ್ರಾರಂಭವಾಗಲಿದೆ. ಇನ್ನು ಸಮಾನ ಶಿಕ್ಷಣದ ಕನಸು ಸಾಕಾರಗೊಳಿಸಲು ಸರ್ಕಾರ ಕ್ರಮಕೈಗೊಳ್ಳಲಾಗಿದ್ದು, 62.59 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, 47.45 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, 1.5 ಲಕ್ಷ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್ ನೀಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.​

ಸರ್ವೋದಯ ಅಭಿವೃದ್ಧಿ ಮಾದರಿ, ಹಸಿವು ಮುಕ್ತ ಕರ್ನಾಟಕ ನಮ್ಮ ಧೇಯ. ಮೂರು ವರ್ಷಗಳ ಬರಗಾಲ ಇದ್ರೂ ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಬರಲಿಲ್ಲ. ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ಗೆ ನಾಳೆ ಚಾಲನೆ ನೀಡಲಿದ್ದು,  ಬಡವರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ಕೋಮುವಾದ ಹೆಸರಲ್ಲಿ ಧರ್ಮ ರಕ್ಷಣೆಗೆ ನಮ್ಮ ವಿರೋಧವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com