ದಾವಣಗೆರೆ: ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಹಾಗೂ ಬ್ಯಾಂಕ್ ಗಳಿಂದ ಪಡೆದ ಸಾಲ ಮರುಪಾವತಿ ಮಾಡಲಾಗದ ಕಾರಣ ದಾವಣಗೆರೆಯಲ್ಲಿ ಆರು ಮಂದಿ ತಮ್ಮ ಪ್ರಾಣ ತ್ಯಜಿಸಿದ್ದಾರೆ.
ಇಬ್ಬರು ರೈತರು ತಮ್ಮ ಜೀವನ ಅಂತ್ಯಗೊಳಿಸಿದ್ದು, ಮತ್ತೊಬ್ಬ ರೈತ ತನ್ನ ಪತ್ನಿ ಹಾಗೂ ಮಕ್ಕಳಿಗೆ ವಿಷವುಣಿಸಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಮೂವರು ರೈತರು ಬ್ಯಾಂಕ್ ಗಳಿಂದ ಸಾಲ ಪಡೆದಿದ್ದು ಮರುಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾವಿನ ಮೊರೆ ಹೋಗಿದ್ದಾರೆ.
ಚನ್ನಗಿರಿ ತಾಲೂಕಿನ ಬೆಳಲ್ಗೆರೆ ಗ್ರಾಮದ ಪಾಲಾಕ್ಷಿ, ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಅಡಕೆ ಬೆಳೆದಿದ್ದರು, ಇದಕ್ಕಾಗಿ ಸಾಲ ಪಡೆದಿದ್ದರು, ಗುರುವಾರ ರಾತ್ರಿ ತಮ್ಮ ಪತ್ನಿ ಶಶಿಕಲಾ ಹಾಗೂ ಇಬ್ಬರು ಮಕ್ಕಳಾದ ಕಾರ್ತಿಕ್(8) ಮತ್ತು ವರ್ಷಿಣಿ(6) ಆಹಾರದಲ್ಲಿ ವಿಷ ಬೆರೆಸಿ ತಿಂದು ಸಾವಿಗೆ ಶರಣಾಗಿದ್ದಾರೆ.
ಸಾವಿನ ಹಿಂದಿನ ಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಪಾಲಾಕ್ಷಿ ಸಂಸಾರದಲ್ಲಿ ಕೌಟುಂಬಿಕ ಕಲಹವಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹೊನ್ನಾಳಿ ತಾಲೂಕಿನ ಮಹಾಂತೇಶ್ (35) ಎಂಬುವರು, ತಾವು ಬೆಳೆದಿದ್ದ ಜೋಳ ಬರದಿಂದಾಗಿ ನಾಶವಾದ ಕಾರಣ ಬೆಳೆಗೆ ಸಿಂಪಡಿಸುವ ಔಷಧಿ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ, ಅವರ ಕೊಳವೆ ಬಾವಿ ಬರಿದಾಗಿದ್ದು, ಬ್ಯಾಂಕ್ ನಿಂದ 5 ಲಕ್ಷ ರು. ಸಾಲ ಪಡೆದಿದ್ದರು.
ಸುರಗೊಂಡನಕೊಪ್ಪ ಗ್ರಾಮದ ಸೀತಾನಾಯಕ್ (53), ಅವರ ಜೋಳದ ಬೆಳೆ ಕೂಡ ನಾಶವಾಗಿತ್ತು. ಸಾಲ ತೀರಿಸಲಾಗದೇ ಅವರು ಕೂಡ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.