ಬೆಂಗಳೂರು: ಸಾಲಬಾಧೆಯಿಂದ ಸಾಫ್ಟ್ ವೇರ್ ಇಂಜಿನಿಯರ್ ಪತ್ನಿಯೊಬ್ಬರು ತನ್ನ 10 ತಿಂಗಳ ಮಗು ಸೇರಿದಂತೆ ಇಬ್ಬರು ಮಕ್ಕಳಿಗೆ ನೇಣಿ ಬಿಗಿದು ಬಳಿಕ ತಾವೂ ನೇಣಿಗೆ ಶರಣಾಗಿರುವ ದಾರುಣ ಘಟನೆ ಹಲಸೂರಿನ ಮರ್ಫಿಟೌನ್ ನಲ್ಲಿ ಗುರುವಾರ ರಾತ್ರಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ರೇಣುಕಾ(34) ಎಂಬುವವರು ನಿನ್ನೆ ರಾತ್ರಿ ತನ್ನ ಮಗಳು ಪಾವನಿ(10 ತಿಂಗಳು) ಮತ್ತೊಬ್ಬ ಮಗಳು ನಿಶ್ಚಿತಾ(6 ವರ್ಷ)ಗೆ ನೇಣು ಬಿಗಿದು ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರೇಣುಕಾ ಅವರ ಪತಿ ಹೇಮಂತ್ ಕುಮಾರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಪತಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದಾಗ ಇಬ್ಬರು ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೇಮಂತ್ ಕುಮಾರ್ ಅವರಿಗೆ ಸರಿಯಾದ ಕೆಲಸ ಸಿಗದ ಹಿನ್ನೆಲೆಯಲ್ಲಿ ಸುಮಾರು 35 ಲಕ್ಷ ರುಪಾಯಿವರೆಗೆ ಸಾಲ ಮಾಡಿದ್ದ ದಂಪತಿ, ಅದನ್ನು ಮರು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಸಾಲದಿಂದ ನೊಂದ ಮಹಿಳೆ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.