ಶಿರಸಿ ಹಿಂಸಾಚಾರ: ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಚಾರ್ಜ್, ಗಾಳಿಯಲ್ಲಿ ಗುಂಡು

ಪರೇಶ್ ಮೇಸ್ತಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು...
ಪ್ರತಿಭಟನೆ
ಪ್ರತಿಭಟನೆ
ಶಿರಸಿ: ಪರೇಶ್ ಮೇಸ್ತಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ನಿಷೇಧಾಜ್ಞೆ ನಡುವೆಯೂ ಮಂಗಳವಾರ ಬೆಳಗ್ಗೆ ಶಿರಸಿಯಲ್ಲಿ ನಡೆದ ಜಾಥಾ ವೇಳೆ ಕಲ್ಲು ತೂರಾಟ ನಡೆದಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. 
ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ 12ರಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇಂದು ಪರೇಶ್ ಮೇಸ್ತಾ ಸಾವಿಗೆ ನ್ಯಾಯಾ ಕೋರಿ ಪ್ರತಿಭಟನಾಕಾರರು ಬೀದಿಗಿಳಿದಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ಕೆಲ ಪ್ರತಿಭಟನಾಕಾರರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ. 
ಪ್ರತಿಭಟನಕಾರರು ರಸ್ತೆಗಳಲ್ಲಿ ಟಯರ್ ಗಳನ್ನು ಸುಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಕಲ್ಲು ತೂರಾಟ ನಡೆಸಿದ್ದು ಇದರಲ್ಲಿ 6 ಅಗ್ನಿಶಾಮಕ ವಾಹನ, ಅಂಗಡಿಗಳು ಜಕಂಗೊಂಡಿವೆ. ಪೊಲೀಸರು ಲಾಠಿ ಚಾರ್ಜ್ ಮಾಡಿದರು ಪರಿಸ್ಥಿತಿ ಹತೋಟಿಗೆ ಬಾರದಿದ್ದರಿಂದ ನಗರಸಭೆಯ ಬಳಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಶ್ರುವಾಯು ಪ್ರಯೋಗ ಕೂಡ ಮಾಡಿರುವ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ. 
ಇನ್ನು ಶಿರಸಿಯ ಮಾರಿಗುಡಿ ವೃತ್ತದ ಬಳಿ 70 ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಗುಂಪಾಗಿ ಸೇರಿ ಗಲಭೆಗೆ ಮುಂದಾದ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. 
ಪರೇಶ್ ಮೇಸ್ತಾ ಅನುಮಾನಾಸ್ಪದ ಸಾವು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com