ವಿಜಯಪುರ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಹೊಸ ತಿರುವು: ಬಾಲಕಿ ಸತ್ತಿದ್ದು ಉಸಿರಾಟ ಸಮಸ್ಯೆಯಿಂದ ಎಂದ ಪೊಲೀಸರು

ರಾಜ್ಯದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿರುವ ವಿಜಯಪುರ ಅತ್ಯಾಚಾರ, ಕೊಲೆ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದ್ದು, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿಲ್ಲ, ಆಕೆ ಸತ್ತಿದ್ದು ಉಸಿರಾಟ ಸಮಸ್ಯೆಯಿಂದ ಎಂದು ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಳಗಾವಿ: ರಾಜ್ಯದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿರುವ ವಿಜಯಪುರ ಅತ್ಯಾಚಾರ, ಕೊಲೆ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದ್ದು, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿಲ್ಲ, ಆಕೆ ಸತ್ತಿದ್ದು ಉಸಿರಾಟ ಸಮಸ್ಯೆಯಿಂದ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ. 
ಬಾಲಕಿಯ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಪ್ರಕಾರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿಲ್ಲ ಎಂಬುದು ತಿಳಿದುಬಂದಿದೆ ಎಂದು ತನಿಖಾ ತಂಡ ಹೇಳಿಕೊಂಡಿದೆ. ಅಲ್ಲದೆ, ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಅಪ್ರಾಪ್ತ ಬಾಲಕ ಹತ್ಯೆಗೀಡಾದ ಬಾಲಕಿಗೆ ಕಳೆದೆರಡು ವರ್ಷಗಳಿಂದ ಪರಿಚಯಸ್ತನಾಗಿದ್ದು, ಮೊಬೈಲ್ ನಲ್ಲಿ ಇಬ್ಬರ ನಡುವೆ ನಡೆದಿರುವ ಸಂಭಾಷಣೆ ಸಾಕ್ಷ್ಯಾಧಾರವನ್ನು ನೀಡಿದ್ದಾನೆಂದು ತಿಳಿಸಿದೆ. 
ಪ್ರಾಥಮಿಕ ವರದಿಯ ಪ್ರಕಾರ ಬಾಲಕಿ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ. ಪ್ರಸ್ತುತ ವರದಿ ಬೆಳಗಾವಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತಲುಪಿದ್ದು, ಅಂತಿಮ ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮೃತಪಟ್ಟ ಬಾಲಕಿ ಹಾಗೂ ಆರೋಪಿ ಇಬ್ಬರೊಂದಿಗು ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ. 
ಮೃತ ಬಾಲಕಿ ಹಾಗೂ ಆರೋಪಿ ಎಂದು ಹೇಳಲಾಗುತ್ತಿರುವ ಬಾಲಕ ಇಬ್ಬರೂ ಪರಿಚಯಸ್ತರೇ ಆಗಿದ್ದು, ಈ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇವರಿಬ್ಬರ ಸ್ನೇಹಿತರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. 
ಶುಕ್ರವಾರವಷ್ಟೇ ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಸಿಐಡಿ ಪೊಲೀಸರು ನಾಲ್ಕು ಮಂದಿಯನ್ನು ಬಂಧನಕ್ಕೊಳಪಡಿಸಿದ್ದರು.
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ವಿಜಯಪುರದ ದಲಿತ ನಾಯಕ, ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸುತ್ತಿದ್ದಾರೆ. ಪ್ರಕರಣವನ್ನು ದುರ್ಬಲಗೊಳಿಸಲು ಕೆಲವು ಒತ್ತಡ ಹೇರುತ್ತಿದ್ದಾರೆ. ಪ್ರತೀದಿನ ಪೊಲೀಸರು ಒಂದೊಂದು ರೀತಿಯಲ್ಲಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಪೊಲೀಸರು ಆರೋಪಿ ಅಪ್ರಾಪ್ತನೆಂದು ಹೇಳುತ್ತಿದ್ದಾರೆ. ಈ ರೀತಿಯ ಹೇಳಿಕೆ ಬಾಲಕಿಯನ್ನು ಹತ್ಯೆ ಮಾಡಿದ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯಗಳಿವೆ. ಬಾಲಕಿಗೆ ಹಾಗೂ ದಲಿತರಿಗೆ ನ್ಯಾಯ ದೊರಕುವವರೆಗೂ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆಂದು ಹೇಳಿದ್ದಾರೆ. 
ಇನ್ನು ಘಟನೆ ಸಂಬಂಧ ಹೇಳಿಕೆ ನೀಡಿರುವ ಮೃತ ಬಾಲಕಿಯ ಸಹೋದರಿ, ಪ್ರಮುಖ ಆರೋಪಿ ನನ್ನ ಸಹೋದರಿಯನ್ನು ರಸ್ತೆ ಮಾರ್ಗದ ಮಧ್ಯೆ ತಡೆದಿದ್ದ. ಬಳಿಕ ತನ್ನ ಗೆಳೆಯರ ಸಹಾಯದೊಂದಿಗೆ ಆಕೆಯನ್ನು ಆಟೋರಿಕ್ಷಾದಲ್ಲಿ ಎಳೆದೊಯ್ದಿದ್ದ. ಅವರಿಂದ ತಪ್ಪಿಸಿಕೊಂಡ ನಾನು ಶಿಕ್ಷಕರೊಂದಿಗೆ ಸ್ಥಳಕ್ಕೆ ಬರುವಷ್ಟರಲ್ಲಿ ಅಲ್ಲಿ ಯಾರೂ ಇರಲಿಲ್ಲ. ಸಹೋದರಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಸ್ಥಳವೊಂದರಲ್ಲಿ ಆಕೆ ಉಸಿರಾಡಲು ಸಾಧ್ಯವಾಗದೆ ನರಳುತ್ತಿದ್ದಳು ಎಂದು ಹೇಳಿದ್ದಾರೆ. 
ಬಾಲಕಿ ಮೇಲೆ ಮೇಲೆ ಸಾಮೂಹಿಕ ಅತ್ಯಾಚಾರವಾಗಿಲ್ಲ. ಆರೋಪಿ ಹಾಗೂ ಮೃತಪಟ್ಟ ಬಾಲಕಿ ಇಬ್ಬರೂ ಪರಿಚಯಸ್ತರೇ ಆಗಿದ್ದು, ಬಾಲಕಿ ಓದುತ್ತಿದ್ದ ಶಾಲೆಯಲ್ಲಿ ಆರೋಪಿ ಕೂಡ ವಿದ್ಯಾಭ್ಯಾಸ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com