ಕೊನೆಗೂ ಸೆರೆ ಸಿಕ್ಕ ಬೆಂಗಳೂರು ಎಟಿಎಂ ಹಲ್ಲೆಕೋರ; ಆಂಧ್ರದ ಚಿತ್ತೂರಿನಲ್ಲಿ ಆರೋಪಿ ಬಂಧನ

ಮೂರು ವರ್ಷಗಳ ಹಿಂದೆ ಇಡೀ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಎಟಿಎಂ ನಲ್ಲಿ ಮಹಿಳೆ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಕೊನೆಗೂ ಸೆರೆಸಿಕ್ಕಿದ್ದು, ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೂರು ವರ್ಷಗಳ ಹಿಂದೆ ಇಡೀ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಎಟಿಎಂ ನಲ್ಲಿ ಮಹಿಳೆ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಕೊನೆಗೂ ಸೆರೆಸಿಕ್ಕಿದ್ದು, ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. 

ಬಂಧಿತ ಆರೋಪಿ, ಮಧುಕರ್ ರೆಡ್ಡಿಯಾಗಿದ್ದು, ಆತ ತಲೆ ಬೋಳಿಸಿಕೊಂಡು ಯಾರಿಗೂ ಗುರುತು ಸಿಗದಂತೆ ಕೇರಳದ ಎರ್ನಾಕುಲಂನಲ್ಲಿದ್ದ ಎಂದು ಚಿತ್ತೂರು ಎಸ್ ಪಿ ಶ್ರೀನಿವಾಸ್ ಘಟ್ಟಿಮನೇನಿ ತಿಳಿಸಿದ್ದಾರೆ.

ಮಧುಕರ್ ರೆಡ್ಡಿ ಬಂಧನದ ನಂತರ ಚಿತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ವಿವರ ನೀಡಿದ ಅವರು, ಮಧುಕರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ 2013ರಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ಮಾಡಿದ್ದು ನಾನೇ, ಖರ್ಚಿಗೆ ದುಡ್ಡಿಲ್ಲದೆ ಎಟಿಎಂಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಿದರು.

ಜ್ಯೋತಿಯವರ ಮೇಲೆ ಹಲ್ಲೆ ಮಾಡುವ ಮುನ್ನಾದಿನ ಕಬ್ಬನ್ ಪಾರ್ಕ್ ನಲ್ಲಿ ಇಡೀ ದಿನ ಊಟ ತಿಂಡಿಯಿಲ್ಲದೆ ಅಲೆದಾಡುತ್ತಿದ್ದ. 2005ರಿಂದ ಅನೇಕ ಕುಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

2013, ನವೆಂಬರ್ ನಲ್ಲಿ ಬೆಂಗಳೂರಿಗೆ ಬರುವ ಮುನ್ನ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಧರ್ಮಾವರಂನಲ್ಲಿ ವೃದ್ಧೆಯೊಬ್ಬರನ್ನು ಕೊಂದು ಬಂದಿದ್ದ.ನಂತರ ಕದಿರಿಗೆ ಪ್ರಯಾಣ ಬೆಳೆಸಿ ಕಳ್ಳತನ ಮಾಡಿ ಅಲ್ಲಿಂದ ಬೆಂಗಳೂರಿಗೆ ಬಂದಿದ್ದ ಎಂದು ಮಧುಕರ ರೆಡ್ಡಿಯ ವೃತ್ತಾಂತ ಹೇಳುತ್ತಾರೆ ಪೊಲೀಸರು.



ಘಟನೆ ಹಿನ್ನೆಲೆ: ಮೂರುವರೆ ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್ 19ರಂದು ಬೆಂಗಳೂರಿನ ಕಾರ್ಪೋರೇಷನ್ ಕಚೇರಿ ಆವರಣದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ನಲ್ಲಿ ಹಣ ಡ್ರಾಮಾಡಲು ತೆರಳಿದ್ದ ಜ್ಯೋತಿ ಉದಯ್  ಎಂಬ ಮಹಿಳೆ ಮೇಲೆ ಆರೋಪಿ ಭೀಕರವಾಗಿ ಹಲ್ಲೆ ನಡೆಸಿ ಎಟಿಎಂ ಕಾರ್ಡ್ ಹೊತ್ತು ಪರಾರಿಯಾಗಿದ್ದ. ಜ್ಯೋತಿ ಉದಯ್ ಎಟಿಎಂ ಒಳಗೆ ಹೋಗುತ್ತಿದ್ದಂತೆಯೇ ಎಟಿಎಂನ ಶೆಟರ್ ಮುಚ್ಚಿದ ಆರೋಪಿ ಬಳಿಕ ಹಣ ಡ್ರಾ ಮಾಡಿ  ಕೊಡುವಂತೆ ಕೇಳಿದ್ದ. ಇದಕ್ಕೆ ಜ್ಯೋತಿ ಒಪ್ಪದಿದ್ದಾಗೆ ಆಕೆಯ ಮೇಲೆ ತಾನು  ತಂದಿದ್ದ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ.

ಸುಮಾರು ಹೊತ್ತಿನ ಬಳಿಕ ರಕ್ತದ ಕಲೆಯನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಬರೊಬ್ಬರಿ ನಾಲ್ತು ತಿಂಗಳ ಸತತ ಚಿಕಿತ್ಸೆ ಬಳಿಕ ಜ್ಯೋತಿ ಉದಯ್  ಚೇತರಿಸಿಕೊಂಡಿದ್ದರು. ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದ ಪೊಲೀಸರು ಸಾಕಷ್ಟು ತಿಂಗಳಗಳ ವರೆಗೆ ತನಿಖೆ ನಡೆಸಿದರೂ ಆತನ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಹೀಗಾಗಿ ಎಟಿಎಂನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ವಿವಿಧ  ರಾಜ್ಯಗಳಿಗೆ ಕಳುಹಿಸಿ ತನಿಖೆ ನಡೆಸಿದ್ದರು.

ಇದೀಗ ಆಂಧ್ರ ಪ್ರದೇಶದ ಮದನಪಲ್ಲಿಯ ನಲ್ಲಪಲ್ಲಿ ಎಂಬಲ್ಲಿ ನಿಂತಿದ್ದ ಮಧುಕರ್ ರೆಡ್ಡಿಯನ್ನು ಅಲ್ಲಿನ ಓರ್ವ ಟ್ರಾಫಿಕ್ ಪೊಲೀಸರು ಗುರುತಿಸಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಆಂಧ್ರ ಪ್ರದೇಶ  ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಮೂರು ದಿನಗಳ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆತ ಎಟಿಎಂನಲ್ಲಿ ಹಲ್ಲೆ ಮಾಡಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಇದೀಗ ಕರ್ನಾಟಕದ ಪೊಲೀಸರು ಆತನ ಬಂಧನಕ್ಕೆ ಆಂಧ್ರ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿ ಮದನಪಲ್ಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅನುಮತಿ ಬಳಿಕ ಆರೋಪಿಯನ್ನು  ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಕಾನೂನಿನ ಕಣ್ಣುತಪ್ಪಿಸಲು ಸಾಧ್ಯವಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನ: ಪರಮೇಶ್ವರ್
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ ಅವರು, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂಬುದಕ್ಕೆ ಎಟಿಎಂ ಹಲ್ಲೆ ಪ್ರಕರಣವೇ ಸ್ಪಷ್ಟ ನಿದರ್ಶನವಾಗಿದೆ. ತಪ್ಪಿ  ಮಾಡಿದರೆ ಶಿಕ್ಷೆ ಖಂಡಿತ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ. ಅಂತೆಯೇ ಬಂಧನ ಕುರಿತಂತೆ ಮಾತನಾಡಿದ ಪರಮೇಶ್ವರ ಅವರು, ಆಂಧ್ರ ಪ್ರದೇಶ ಪೊಲೀಸರ ಸಹಕಾರದೊಂದಿಗೆ ಕರ್ನಾಟಕ ಪೊಲೀಸರು ಆಂಧ್ರ ಪ್ರದೇಶದ ಅನಂತಪುರದಲ್ಲಿ ಬಂಧಿಸಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com