ಕೌನ್ಸೆಲಿಂಗ್ ಹೆಸರಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲು!

ಕೌನ್ಸೆಲಿಂಗ್ ಹೆಸರಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲನ ವಿರುದ್ಧ ಇದೀಗ ಬೆಂಗಳೂರಿನಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕೆವಿ ಪ್ರಾಂಶುಪಾಲ ಕುಮಾರ್ ಠಾಕೂರ್
ಕೆವಿ ಪ್ರಾಂಶುಪಾಲ ಕುಮಾರ್ ಠಾಕೂರ್

ಬೆಂಗಳೂರು: ಕೌನ್ಸೆಲಿಂಗ್ ಹೆಸರಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲನ ವಿರುದ್ಧ ಇದೀಗ ಬೆಂಗಳೂರಿನಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಬೆಂಗಳೂರಿನ ಸದಾಶಿವನಗರ ಸಮೀಪದ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಕುಮಾರ್‌ ಠಾಕೂರ್‌ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಕುಮಾರ್‌ ಠಾಕೂರ್‌ ವಿರುದ್ಧ ಪೊಲೀಸರು  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ)  ಕಾಯ್ದೆಯ ಕಲಂ 11ರಡಿ (ಲೈಂಗಿಕ ಕಿರುಕುಳ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು, ಕೌನ್ಸೆಲಿಂಗ್ ಎಂದು ವಿದ್ಯಾರ್ಥಿನಿಯರನ್ನು ಕ್ಯಾಬಿನ್ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ  ಕೇಂದ್ರೀ ವಿದ್ಯಾಲಯದ ಪ್ರಾಂಶುಪಾಲ ಕುಮಾರ್ ಠಾಕೂರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

"ಲೈಂಗಿಕ ಕಿರುಕುಳ ಸಂಬಂಧ ದೂರು ಬಂದ ಬೆನ್ನಲ್ಲೇ ನಾವು ಶಾಲಾ ಆಡಳಿತ ಮಂಡಳಿ ಸಿಬ್ಬಂದಿಗಳಿಗೆ ಕರೆ ಮಾಡಿ ವಿಚಾರ ತಿಳಿಸಿದ್ದೆವು. ನಮ್ಮ ಪ್ರಾಥಮಿಕ ತನಿಖೆ ಬಳಿಕ ಪ್ರಾಂಶುಪಾಲ ಕುಮಾರ್ ಠಾಕೂರ್ ಅವರು ಕೌನ್ಸೆಲಿಂಗ್  ಎಂದು ವಿದ್ಯಾರ್ಥಿಗಳನ್ನು ಕರೆಸಿಕೊಂಡು ಅವರೊಂದಿಗೆ ಅಶ್ಲೀಲವಾಗಿ ಮಾತಾನಾಡುತ್ತಿದ್ದರು ಎಂದು ಕೆಲ ವಿದ್ಯಾರ್ಥಿನಿಯರು ದೂರಿದ್ದಾರೆ. ಹೀಗಾಗಿ ಪ್ರಾಂಶುಪಾಲ ಕುಮಾರ್ ಠಾಕೂರ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು  ತನಿಖೆ ನಡೆಸಲಾಗುತ್ತಿದೆ. ಇದು ಪೋಕ್ಸೋ ಕಾಯ್ದೆಯಡಿಯಲ್ಲಿ ಬರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದೆ. ಪ್ರಕರಣ ಸಂಬಂಧ ತಮ್ಮ ಮೇಲೆ ಈ ವರೆಗೂ ಯಾವುದೇ ರೀತಿಯ ಒತ್ತಡಗಳೂ ಬಂದಿಲ್ಲ. ದೂರು  ನೀಡಿರುವ ಬಾಲಕಿಯೇ ಸ್ವತಃ ಹೇಳಿಕೆ ನೀಡಿರುವಂತೆ ಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳವಾಗಿದೆಯೇ ಹೊರತು ದೈಹಿಕ ಕಿರುಕುಳವಾಗಿಲ್ಲ ಎಂದು ಹೇಳಿದ್ದಾಳೆ ಎಂದು ಅವರು ಹೇಳಿದ್ದಾರೆ.

ಪ್ರಕರಣದಲ್ಲಿ ಪೊಲೀಸರು ಯಾವುದೇ ರೀತಿಯ ಚಡ ಮಾಡಿಲ್ಲ. ನಿಶ್ಪಕ್ಷಪಾತವಾಗಿ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿದ್ದಾರೆ. ಅಂತೆಯೇ ಪ್ರಕರಣ ದಾಖಲದ 12 ಗಂಟೆಯೊಳಗೆ ಪ್ರಾಂಶುಪಾಲ ಕುಮಾರ್ ಠಾಕೂರ್  ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದೇವೆ ಎಂದು ಅವರು ಹೇಳಿದರು.

ಕಾಮುಕ ಪ್ರಾಂಶುಪಾಲನ ಅಮಾನತಿಗೆ ಮುಂದಾದ ಕೆಎಸ್ ಪಿಸಿಆರ್
ವಿದ್ಯಾರ್ಥಿನಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಬಹಿರಂಗವಾಗುತ್ತಿದ್ದಂತೆಯೇ ಅತ್ತ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗ (ಕೆಎಸ್ ಪಿಸಿಆರ್) ಕಾಮುಕ ಪ್ರಾಂಶುಪಾಲ ಕುಮಾರ್ ಠಾಕೂರ್ ಅವರನ್ನು  ಅಮಾನತು ಮಾಡುವಂತೆ ಕೇಂದ್ರೀಯ ವಿದ್ಯಾಲಯ ಸಂಘಟನೆಗೆ ಪತ್ರಬರೆದಿದೆ. ಕೆಎಸ್ ಪಿಸಿಆರ್ ನ ಅಧ್ಯಕ್ಷೆ ಕೃಪಾ ಆಳ್ವ ಅವರು ಈ ಬಗ್ಗೆ ಪತ್ರ ಬರೆದಿದ್ದು, ಪ್ರಾಂಶುಪಾಲನನ್ನು ಅಮಾನತು ಮಾಡಿ. ಅಂತೆಯೇ ಪ್ರಕರಣ ಸಂಬಂಧ  ಕೂಲಂಕುಷ ತನಿಖೆ ನಡೆಸುವಂತೆ ಪ್ರಾಂಶುಪಾಲ ಕುಮಾರ್ ಠಾಕೂರ್ ಜಾಮೀನು ಪಡೆಯಲು ನೆರವಾದ ವಕೀಲನ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com