ಅಂಗನವಾಡಿ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಹಾಲು

ರಾಜ್ಯದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೆ ವಾರದ 6 ದಿನ ಮೊಟ್ಟೆ, ಹಾಲು ವಿತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೆ ವಾರದ 6 ದಿನ ಮೊಟ್ಟೆ, ಹಾಲು ವಿತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ಬಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸು ಸಚಿವಾಲಯದ ಅನುಮೋದನೆ ದೊರೆತ ಬಳಿಕ ಈ ಬಹು ಉದ್ದೇಶಿತ ಯೋಜನೆ  ಅನುಷ್ಠಾನವಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಈಗಾಗಲೇ ಮೊಟ್ಟೆ ನೀಡಲಾಗುತ್ತಿದೆಯಾದರೂ, ಅಪೌಷ್ಟಿಕತೆಯಿಂದ ಬಳಲುತ್ತಿರುವ  ಮಕ್ಕಳಿಗೆ ಮಾತ್ರ ವಾರಕ್ಕೆ 6 ದಿನ, ಅದೇ ಅಂಗನವಾಡಿಯಲ್ಲಿ ಕಲಿಯುವ ಇತರ ಮಕ್ಕಳಿಗೆ 2 ದಿನ ಮೊಟ್ಟೆ ಮತ್ತು ಹಾಲು ವಿತರಿಸಲಾಗುತ್ತಿದೆ.

ಈ ಬಗ್ಗೆ ಸಾಕಷ್ಟು ವಿರೋಧ ಕೇಳಿಬಂದಿತ್ತು. ಒಂದೇ ಸೂರಿನಡಿ ಕಲಿಯುವ ಮಕ್ಕಳಿಗೆ ಸರ್ಕಾರ ಭೇದ-ಭಾವ ಮಾಡುತ್ತಿದೆ ಎಂದು ಕೆಲ ಪತ್ರಿಕೆಗಳು ವರದಿ ಪ್ರಕಟಿಸಿದ್ದವು. ಅಲ್ಲದೆ ಸ್ವತಃ ಅಂಗನವಾಡಿ ಕಾರ್ಯಕರ್ತೆಯರೂ ಕೂಡ  ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಹೀಗಾಗಿ ಸರ್ಕಾರ ತನ್ನ ನಿರ್ಧಾರದಲ್ಲಿ ದೋಷ ಸರಿಪಡಿಸಿಕೊಳ್ಳಲು ಮುಂದಾಗಿದ್ದು, ಒಂದೇ ಸೂರಿನಡಿ ಕಲಿಯುವ ಮಕ್ಕಳಿಗೆ ಈ ರೀತಿಯ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ.  ಎಲ್ಲಾ ಮಕ್ಕಳಿಗೂ ಒಂದೇ ರೀತಿ ಸೌಲಭ್ಯ ನೀಡಬೇಕು ಎಂಬ ಬೇಡಿಕೆ ಬಂದ ಹಿನ್ನಲೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಂಡಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ಅಪೌಷ್ಟಿಕತೆ, ಅನಾರೋಗ್ಯದಿಂದ ಸಾಯುವ ಮಕ್ಕಳ ಪ್ರಮಾಣ ಇಡೀ ದೇಶದ  ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ಹುಟ್ಟಿದ 1 ಸಾವಿರ ಮಕ್ಕಳ ಪೈಕಿ  ಐದು ವರ್ಷದೊಳಗೆ ಮರಣಕ್ಕೀಡಾಗುವ ಮಕ್ಕಳ ಸಂಖ್ಯೆ ಇಡೀ ದೇಶದ ಸರಾಸರಿ 30 ರಷ್ಟಿದ್ದರೆ, ಕರ್ನಾಟಕದಲ್ಲಿ ಈ ಸಂಖ್ಯೆ  ಶೇ.42ರಷ್ಟಿದೆ. ಈ ಪ್ರಮಾಣವನ್ನು ಇಳಿಸುವ ಉದ್ದೇಶದಿಂದ ವಾರದ 6 ದಿನ ಮೊಟ್ಟೆ, ಹಾಲು ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ನಿರ್ಧಾರದಿಂದಾಗಿ ರಾಜ್ಯದ ವಿವಿಧ ಅಂಗನವಾಡಿಯಲ್ಲಿರುವ ಸುಮಾರು 60 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ಇನ್ನು ಮೊಟ್ಟೆ ತಿನ್ನದ ಮಕ್ಕಳಿಗೆ ಅಥವಾ ಮೊಟ್ಟೆ ದೊರೆಯದ ಅಂಗನವಾಡಿ ಕೇಂದ್ರಗಳಿಗೆ ಬಾಳೆ ಹಣ್ಣು, ಹಾಲು ಅಥವಾ ಇತರೆ ಹಣ್ಣುಗಳನ್ನು ನೀಡಲಾಗುತ್ತದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com