ನಾನು ಭಯೋತ್ಪಾದಕನೇ ಅಥವಾ ನಾನು ಎಕೆ- 47 ರೈಫಲ್ ಹೊಂದಿದ್ದನೇ?: ಅಗ್ನಿ ಶ್ರೀಧರ್
ಬೆಂಗಳೂರು: ಪೊಲೀಸರು ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಆರೋಪ ತಳ್ಳಿ ಹಾಕಿರುವ ಮಾಜಿ ರೌಡಿ ಹಾಗೂ ಲೇಖಕ ಅಗ್ನಿ ಶ್ರೀಧರ್, ನನ್ನ ಮನೆ ಮೇಲೆ ದಾಳಿ ನಡೆಸುವುದು ಅನಾವಶ್ಯಕವಾಗಿತ್ತು ಎಂದು ಹೇಳಿದ್ದಾರೆ.
ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಲೇಖಕ ಅಗ್ನಿ ಶ್ರೀಧರ್ ಅವರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ ಸಂಬಂಧ ಪ್ರತಿಕ್ರಿಯಿಸಿರುವ ಅಗ್ನಿಶ್ರೀಧರ್, ಕೊಲೆ ಯತ್ನ ಪ್ರಕರಣ ಕೇಸಲ್ಲಿ ತಲೆ ಮರೆಸಿಕೊಂಡಿದ್ದ ಸೈಲೆಂಟ್ ಸುನೀಲ್ ಮತ್ತು ಒಂಟೆ ರೋಹಿತ್ ಅವರಿಗೆ ನಾನು ಆಶ್ರಯ ನೀಡಿದ್ದೇನೆ ಎಂಬ ಆರೋಪದ ಮೇಲೆ ನನ್ನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.
ಅವರಿಬ್ಬರು ನನಗೆ ಗೊತ್ತಿಲ್ಲ ಎಂದು ನಾನು ಹೇಳಿಯೇ ಇಲ್ಲ, ಪೊಲೀಸರು ಕರೆ ಮಾಡಿ ಅವರಿಬ್ಬರನ್ನು ಕಳುಹಿಸು ಎಂದು ಹೇಳಿದ್ದಾರೆ ನಾನು ಕಳುಹಿಸುತ್ತಿದ್ದೆ. ಆದರೆ ಅವರು ನನ್ನ ಮನೆ ಮೇಲೆ ದಾಳಿ ನಡೆಸಿದರು. ಅದಕ್ಕಾಗಿ ನನಗೆ ಕೋಪ ಬಂತು, ನಾನು ಭಯೋತ್ಪಾದಕನೇ ಅಥವಾ ನಾನು ಎಕೆ- 47 ಹೊಂದಿದ್ದನೇ ಎಂದು ಪ್ರಶ್ನಿಸಿದ್ದಾರೆ.
ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ಪ್ರಕರಣ ಹಾಗೂ ಆತನ ಸಹಚರ ಟಾಟಾ ರಮೇಶ್ ಎಂಬಾತನಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಶಂಕಿತ ಆರೋಪಿಗಳಿಗೆ ಆಶ್ರಯ ನೀಡಿದ್ದಾರೆಂಬ ಆರೋಪದಲ್ಲಿ ಅಗ್ನಿ ಶ್ರೀಧರ್ ಅವರ ಕುಮಾರಸ್ವಾಮಿ ಲೇಔಟ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಶ್ರೀಧರ್ ಮನೆಯಲ್ಲಿ ನೂರಾರು ಲೀಟರ್ ವಿದೇಶಿ ಮದ್ಯ ಪತ್ತೆಯಾಗಿತ್ತು. ಇನ್ನೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಧರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ನಿರೀಕ್ಷಣಾ ಜಾಮೀನು ಪಡೆದ ಶ್ರೀಧರ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ