
ಬೆಂಗಳೂರು: ಭಾರತದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ಏರೋಸ್ಪೇಸ್ ಅಭಿವೃದ್ಧಿಗೆ ಮುಂದಿನ ಐದು ವರ್ಷಗಳಲ್ಲಿ ಬರೊಬ್ಬರಿ 17 ಸಾವಿರ ಕೋಟಿ ಹೋಡಿಕೆ ಮಾಡಲು ನಿರ್ಧರಿಸಿದೆ.
ಮೂಲಗಳ ಪ್ರಕಾರ ಹೆಎಚ್ಎಎಲ್ ಸಂಸ್ಥೆ ತನ್ನ ವಿವಿಧ ಯೋಜನೆಗಳ ನಿಮಿತ್ತ ಮುಂದಿನ ಐದು ವರ್ಷಗಳಲ್ಲಿ ಸುಮಾರ 17, 500 ಕೋಟಿ ರು.ಗಳನ್ನು ವೆಚ್ಚ ಮಾಡಲಿದೆ. ಆದರೆ ಹೆಚ್ ಎಎಲ್ ನ ಯೋಜನೆಗಳಿಗೆ ಬಂಡವಾಳ ಹೂಡಲು ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿರುವುದರಿಂದ ಬ್ಯಾಂಕ್ಗಳಿಂದ ಸಾಲ ಪಡೆಯಲು ತೀರ್ಮಾನಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಟಿ. ಸುವರ್ಣರಾಜು ಅವರು, ನಮ್ಮ ಬಹುತೇಕ ಯೋಜನಾ ಅಭಿವೃದ್ಧಿ ಕಾರ್ಯಗಳಿಗೆ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದಲೇ ಬಂಡವಾಳ ಹೂಡಲಾಗುತ್ತಿದೆ ಎಂದು ಹೇಳಿದರು.
"ಎಲ್ಸಿಎ ತೇಜಸ್, ಎಎಲ್ಎಚ್, ಎಲ್ಯುಎಚ್ ಮತ್ತು ಎಲ್ಸಿಎಚ್ ಹೆಲಿಕಾಪ್ಟರ್, ಹಾಕ್ ವಿಮಾನ, ಮಿರಾಜ್ ಅಭಿವೃದ್ಧಿ, ಎಚ್'ಟಿಟಿ-40 ನಿರ್ಮಾಣ ಹಾಗೂ ಇತರ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಪ್ರಮಾಣದ ಬಂಡವಾಳದ ಅಗತ್ಯವಿದೆ. ಕೇಂದ್ರ ಸರ್ಕಾರವು ಎಲ್ಸಿಎ ತೇಜಸ್ನ ಮುಂದಿನ ಹಂತದ ನಿರ್ಮಾಣಕ್ಕೆ 1 ಸಾವಿರ ಕೋಟಿ ರು. ನೀಡಲು ಸಮ್ಮತಿಸಿದೆ. ಈ ಬೃಹತ್ ಬಂಡವಾಳದಿಂದಾಗಿ ಸ್ವದೇಶಿ ನಿರ್ಮಿತ ತೇಜಸ್ ಅಥವಾ ಎಲ್ ಸಿಎ ಎಕೆ-1 ಯುದ್ಧ ವಿಮಾನಗಳಿಗೆ ಕಾವೇರಿ ಎಂಜಿನ್ ಅಳವಡಿಕೆ ಮಾಡುವ ಪ್ರಯೋಗ ಕೂಡ ನಡೆಯಲಿದೆ ಎಂದು ಅವರು ಹೇಳಿದರು.
ಕಾವೇರಿ ಎಂಜಿನ್ ಗೆ ಮರುಜೀವ
ಇದೇ ವೇಳೆ ನನೆಗುದಿಗೆ ಬಿದ್ದಿರುವ ಕಾವೇರಿ ಇಂಜಿನ್'ಗೆ ಮರು ಜೀವ ನೀಡಲು ಎಚ್ಎಎಲ್ ನಿರ್ಧರಿಸಿದ್ದು, ಭಾರತದೊಂದಿಗೆ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿರುವ ದಸಾಲ್ಟ್ ಸಂಸ್ಥೆಯ ರಾಫೆಲ್ ಯುದ್ಧ ವಿಮಾನದಿಂದ ಇಂಜಿನ್'ಗೆ ತಾಂತ್ರಿಕ ನೆರವು ಪಡೆಯಲು ತೀರ್ಮಾನಿಸಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಆರ್ಥಿಕ ಇಲಾಖೆ ನಿರ್ದೇಶಕ ಸಿವಿ ರಮಣ್ ರಾವ್ ಅವರು, ಸಂಸ್ಥೆಯ ವಿವಿಧ ಯೋಜನೆಗಳಿಗೆ ಅಗತ್ಯ ಬೀಳುವ ವೆಚ್ಚಗಳಿಗೆ ಸಾರ್ವಜನಿಕ ಕ್ಷೇತ್ರದಿಂದ ಬಂಡವಾಳ ಹೊಂದಿಸಲು ಚಿಂತನೆ ನಡೆಸಲಾಗತ್ತಿದೆ. ಅದರಂತೆ ಐಪಿಓ ಗಳನ್ನು ವಿತರಣೆ, ಷೇರು ಮಾರಾಟಗಳ ಮುಖಾಂತರ ಬಂಡವಾಳ ಹೊಂದಿಸಲಾಗುತ್ತದೆ. ಸುಮಾರು 3.615 ಕೋಟಿ ಮೌಲ್ಯದ ಷೇರುಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ. ಸಂಸ್ಥೆಯ ಸಾಮರ್ಥ್ಯ ವಿಸ್ತರಣೆ ಮಾಡುವುದು ಅಗತ್ಯವಾಗಿದ್ದು, ಇದಕ್ಕಾಗಿ ಈ ಹಿಂದೆ ಎಚ್ಎಎಲ್ನ ಆಡಳಿತ ಮಂಡಳಿಯಿಂದಲೇ ಬಂಡವಾಳ ಬಿಡುಗಡೆಯಾಗಿದೆ. ಮುಂದಿನ ಕಾರ್ಯಗಳಿಗೆ ಏಪ್ರಿಲ್ನಲ್ಲಿ ಸಾಲ ಪಡೆಯಲು ಬ್ಯಾಂಕ್ಗಳ ಮುಂದೆ ಹೋಗಬೇಕಾಗಬಹುದು ಎಂದು ಹೇಳಿದರು.
ಇನ್ನು ಎಚ್ ಎಎಲ್ ಸಾಕಷ್ಟು ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು, 222 ಸುಖೋಯ್ 30 ಎಂಕೆ ಐ ಯುದ್ಧ ವಿಮಾನಗಳ ತಯಾರಿಕೆಗೆ ಸಂಸ್ಥೆ ಸಹಿ ಹಾಕಿದ್ದು, ಈ ಪೈಕಿ ಜನವರಿ ಅಂತ್ಯದ ವೇಳೆ 183 ಯುದ್ಧ ವಿಮಾನಗಳನ್ನು ತಯಾರಿಸಿದೆ. ಉಳಿದ ವಿಮಾನಗಳು 2019 ಅಥವಾ 2020ರ ವೇಳೆಗೆ ಸಿದ್ಧವಾಗುವ ಸಾಧ್ಯತೆಗಳಿವೆ. ಅಂತೆಯೇ ಹೆಚ್ ಎಎಲ್ 40 ತೇಜಸ್ ಯುದ್ಧ ವಿಮಾನಗಳ ತಯಾರಿಗೆ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ ಮೂರು ಯುದ್ಧ ವಿಮಾನಗಳನ್ನು ವಾಯು ಸೇನೆಗೆ ರವಾನಿಸಿದೆ. ಅಂತೆಯೇ ವಾಯುಸೇನೆ ವತಿಯಿಂದ 83 ಎಲ್ ಸಿಎ ಎಂಕೆ 1ಎ ವಿಮಾನಗಳಿಗೆ ಬೇಡಿಕೆ ಬಂದಿದ್ದು, ಇದಲ್ಲದೆ ಅತ್ಯಾಧುನಿಕ ಧೃವ್ ಹೆಲಿಕಾಪ್ಟರ್ ಗೂ ಬೇಡಿಕೆ ಹೆಚ್ಚಾಗಿದೆ. ಜನವರಿವರೆಗೂ 231 ಹೆಲಿಕಾಪ್ಟರ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಇನ್ನೂ 159 ಕಾಪ್ಟರ್ ಗಳಿಗಾಗಿ ಬೇಡಿಕೆ ಬಂದಿದೆ. ಈ ಪೈಕಿ 136 ಕಾಪ್ಟರ್ ಗಳನ್ನು ರವಾನೆ ಮಾಡಲಾಗಿದ್ದು, ಉಳಿದವುಗಳನ್ನು 2017-18ರ ಹೊತ್ತಿಗೆ ರವಾನೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
Advertisement