ನಾಳೆಯಿಂದ ಅರ್ ಟಿಇ ಅರ್ಜಿ ಸಲ್ಲಿಕೆ ಆರಂಭ, ಮಾರ್ಚ್ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನ!

ಪ್ರಸಕ್ತ ವರ್ಷದ ಶಿಕ್ಷಣ ಹಕ್ಕು ಕಾಯ್ದೆ ಅರ್ಜಿಗಳನ್ನು ಮಾರ್ಚ್ 1ರಿಂದ ವಿತರಿಸಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಪಿ.ಸಿ.ಜಾಫರ್ ಸೋಮವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಸಕ್ತ ವರ್ಷದ ಶಿಕ್ಷಣ ಹಕ್ಕು ಕಾಯ್ದೆ ಅರ್ಜಿಗಳನ್ನು ಮಾರ್ಚ್ 1ರಿಂದ ವಿತರಿಸಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ  ಡಾ.ಪಿ.ಸಿ.ಜಾಫರ್ ಸೋಮವಾರ ತಿಳಿಸಿದ್ದಾರೆ.

ತಾಂತ್ರಿಕ ಕಾರಣದಿಂದ ಒಂದೂವರೆ ತಿಂಗಳು ವಿಳಂಬವಾಗಿದ್ದ ಶಿಕ್ಷಣ ಹಕ್ಕು ಕಾಯ್ದೆಯ ನೈಜ ಪ್ರಕ್ರಿಯೆ ಮಾರ್ಚ್ 1ರಿಂದ ಆರಂಭವಾಗಲಿದೆ. ಈಗಾಗಲೇ ಪ್ರಾಯೋಗಿಕ ಹಂತದಲ್ಲಿ ಅರ್ಜಿ ಸಲ್ಲಿಸಿರುವವರು ಮತ್ತೆ ಸಲ್ಲಿಸಬೇಕಾಗಿಲ್ಲ.  ಅವಶ್ಯವಿದ್ದರೆ ತಿದ್ದುಪಡಿ ಮಾಡಬಹುದಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಆರ್ ಟಿಇ ಪ್ರವೇಶ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಪಿ.ಸಿ.ಜಾಫರ್  ಅವರು, ಈ ವರ್ಷ ಸುಮಾರು 1.30 ಲಕ್ಷ ಸೀಟುಗಳು ಲಭ್ಯವಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಪ್ರಾಯೋಗಿಕ ಹಂತದಲ್ಲಿ 1440 ಅರ್ಜಿ ಸಲ್ಲಿಕೆಯಾಗಿದ್ದು, ಇವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ.  ಅರ್ಜಿ ಸಲ್ಲಿಕೆ ವೇಳೆ ತಪ್ಪಾಗಿದ್ದಲ್ಲಿ ತಿದ್ದಿಕೊಳ್ಳಲು ಅವಕಾಶ ನೀಡಲಾಗಿದೆ. ಆಧಾರ್ ಸಂಖ್ಯೆ ಹಾಗೂ ಪಿನ್​ಕೋಡ್ ಮುಖ್ಯವಾಗಿದ್ದು, ಆಧಾರ್ ಕಾರ್ಡ್ ಇಲ್ಲವಾದಲ್ಲಿ ಆಧಾರ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಸಂಖ್ಯೆ ಪಡೆದು  ಅರ್ಜಿ ಸಲ್ಲಿಸಬಹುದು. ವಿಳಾಸ ಬದಲಾಗಿದ್ದರೂ ಅರ್ಜಿ ನೀಡಬಹುದು ಎಂದು ಹೇಳಿದರು.

ಪಾಲಕರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶಾಲೆ ಇರುವ ಬಡಾವಣೆ ಮತ್ತು ವಾಸದ ಬಡಾವಣೆ ಪರೀಕ್ಷಿಸಿಕೊಳ್ಳಬೇಕು. ಕಂದಾಯ ಇಲಾಖೆ, ಆಧಾರ್ ನಂಬರ್ ಸೇರಿ ದಾಖಲೆಗಳು ಅಸಲಿಯಾಗಿದ್ದರೂ ಕೆಲವೊಮ್ಮೆ ಕನ್ನಡ ಮತ್ತು  ಇಂಗ್ಲಿಷ್ ಅಕ್ಷರಗಳಲ್ಲಿನ ಇನಿಶಿಯಲ್ ಹೊಂದಾಣಿಕೆಯಾಗದೆ, ತಿರಸ್ಕಾರವಾಗುವ ಸಾಧ್ಯತೆಗಳಿರುತ್ತವೆ. ಹೀಗಾದಲ್ಲಿ ಆನ್'​ಲೈನ್ ಮೂಲಕ ದೂರು ಸಲ್ಲಿಸಿದರೆ, 48 ಗಂಟೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ. ಅದೇ ರೀತಿ ಬಿಬಿಎಂಪಿ  ವ್ಯಾಪ್ತಿಯ ವಾರ್ಡ್​ಗಳಲ್ಲಿನ ಬಡಾವಣೆಗಳು ಆಧಾರ್​ನಿಂದ ಕೈಬಿಟ್ಟಿದ್ದರೆ, ಅಂಥಹವುಗಳ ಮಾಹಿತಿಯನ್ನು ಶಿಕ್ಷಣ ಇಲಾಖೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಾಫರ್ ತಿಳಿಸಿದರು.

ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ವಿಶೇಷ ಆಧ್ಯತೆ
ಪ್ರಸಕ್ತ ವರ್ಷದಿಂದ ಆರ್​ಟಿಇ ಅಡಿ ವಿಶೇಷ ಸೌಲಭ್ಯ ನೀಡಲಾಗಿದ್ದು, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು, ಅಂಗವಿಕಲ ಮಕ್ಕಳು, ಬೀದಿ ಮಕ್ಕಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಆದರೆ,  ಇವರಿಗೆ ಎರಡನೇ ಹಂತದ ಪ್ರಕ್ರಿಯೆಯಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಇದೇ ವೇಳೆ ಜಾಫರ್ ತಿಳಿಸಿದರು. ಪ್ರಾಯೋಗಿಕ ಅರ್ಜಿ ಸಲ್ಲಿಕೆಯ ಪ್ರಾತ್ಯಕ್ಷಿಕೆ ತೋರಿಸುವಾಗ ಮೊದಲೆರಡು ಬಾರಿ ಅರ್ಜಿ ಸಲ್ಲಿಕೆ ಆಗಲಿಲ್ಲ. ಆನ್ ಲೈನ್   ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅರ್ಜಿ ಸಲ್ಲಿಕೆ ಯಶಸ್ವಿಯಾಯಿತು ಎಂದು ಡಾ.ಪಿ.ಸಿ.ಜಾಫರ್ ಸ್ಪಷ್ಟನೆ ನೀಡಿದರು.

ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?
ಆನ್ ಲೈನ್ ನಲ್ಲಿ http://schooleducation.kar.nic.in ವೆಬ್​ಸೈಟ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಅಂತೆಯೇ ಇಒ, ಡಿಡಿಪಿಐ ಕಚೇರಿಗಳಲ್ಲಿ ಉಚಿತವಾಗಿ ಆರ್​ಟಿಇ ಅರ್ಜಿ ಸಲ್ಲಿಸಬಹುದಾಗಿದೆ.  ಇದಲ್ಲದೆ ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಅಟಲ್ ಜೀ ಕೇಂದ್ರಗಳಲ್ಲಿ 15 ರುಪಾಯಿ ಪಾವತಿಸಿ ಅರ್ಜಿ ಸಲ್ಲಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com